ಪೊನ್ನಂಪೇಟೆ, ಡಿ. ೩೦: ರಾತ್ರಿ ಸಮಯದಲ್ಲಿ ವಾಹನ ಚಾಲನೆಯ ವೇಳೆ ಸಂಭವಿಸುವ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಹಾಗೂ ಹೆಡ್‌ಲೈಟ್‌ಗಳ ಸರಿಯಾದ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಗೋಣಿಕೊಪ್ಪಲು ಲಯನ್ಸ್ ಕ್ಲಬ್, ಮಾನಂದವಾಡಿ ಲಯನ್ಸ್ ಕ್ಲಬ್ ಹಾಗೂ ಕುಟ್ಟ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ರಾತ್ರಿ ವಾಹನ ಚಾಲನಾ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಕುಟ್ಟದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾತ್ರಿ ವಾಹನ ಚಾಲನೆಯ ವೇಳೆ “ಡಿಮ್ ಮತ್ತು ಡಿಪ್” ಹೆಡ್‌ಲೈಟ್‌ಗಳ ಮಹತ್ವವನ್ನು ವಾಹನ ಚಾಲಕರಿಗೆ ತಿಳಿಸಲಾಯಿತು. ಅತಿಯಾದ ಹೈಬೀಮ್ ಲೈಟ್‌ಗಳ ಬಳಕೆ, ಎದುರಿನಿಂದ ಬರುತ್ತಿರುವ ವಾಹನ ಚಾಲಕರ ದೃಷ್ಟಿಗೆ ಅಡ್ಡಿಯಾಗುವುದರಿಂದ ಅನೇಕ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬುದರ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸಲಾಯಿತು.
ಸರಿಯಾದ ಸಮಯದಲ್ಲಿ ಡಿಪ್‌ಲೈಟ್ ಬಳಸುವುದರಿಂದ ರಸ್ತೆ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ತಿಳಿಸಲಾಯಿತು. ಈ ಜಾಗೃತಿ ಕಾರ್ಯಕ್ರಮಕ್ಕೆ ಕುಟ್ಟ ವೃತ್ತ ನಿರೀಕ್ಷಕ ದಾಮೋದರ್ ಚಾಲನೆ ನೀಡಿ ಮಾತನಾಡಿ, ರಾತ್ರಿ ಸಮಯದಲ್ಲಿ ಹೈಬೀಮ್ ಲೈಟ್‌ಗಳ ದುರುಪಯೋಗವೇ ಅನೇಕ ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ವಾಹನ ಚಾಲಕರೂ ಜವಾಬ್ದಾರಿಯುತವಾಗಿ ಲೈಟ್ ಬಳಸಿ ಸುರಕ್ಷಿತ ಚಾಲನೆ ಮಾಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭ ಡಿಮ್ ಮತ್ತು ಡಿಪ್ ಕುರಿತು ಮಾಹಿತಿ ನೀಡುವ ಬಿತ್ತಿಪತ್ರಗಳನ್ನು ವಾಹನ ಚಾಲಕರಿಗೆ ವಿತರಿಸಲಾಯಿತು. ಈ ಬಿತ್ತಿಪತ್ರಗಳನ್ನು ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಿಸಲಾಗಿದ್ದು, ವಿವಿಧ ಭಾಷಿಕ ಚಾಲಕರಿಗೂ ಮಾಹಿತಿ ಸುಲಭವಾಗಿ ತಲುಪುವಂತೆ ಮಾಡಲಾಯಿತು. ಜಾಗೃತಿ ಅಭಿಯಾನದಲ್ಲಿ ಗೋಣಿಕೊಪ್ಪಲು ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಪಿ. ಬೋಪಣ್ಣ, ಕಾರ್ಯದರ್ಶಿ ಸೌಮ್ಯ ಎಂ.ಬಿ., ಖಜಾಂಚಿ ಐ.ಎಂ. ಸೋಮಣ್ಣ, ಮಾನಂದವಾಡಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿಕಾ ರಂಜಿತ್ ಸೇರಿದಂತೆ ಎರಡೂ ಕ್ಲಬ್‌ಗಳ ಸದಸ್ಯರು ಭಾಗವಹಿಸಿ, ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತು ಮಾರ್ಗದರ್ಶನ ನೀಡಿದರು.
ಟಸ್ಕರ್ ಫುಟ್ ರಿಸಾರ್ಟ್ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಹಿರಿಯ ಲಯನ್ಸ್ ಸದಸ್ಯರಾದ ಜೆ.ಎಸ್. ಮಾದಪ್ಪ, ಬೋಸ್ ಪೆಮ್ಮಯ್ಯ, ಜೀವನ್ ಪಿ.ಎಂ. ಚೇತನ್ ಗಣಪತಿ, ಸುನಿಲ್ ಅಲ್ಲುಮಾಡ, ಎಂ.ಎ. ಬಾಲಕೃಷ್ಣ ಹಾಗೂ ಇತರರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ, ಇಂತಹ ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ ಶಾಶ್ವತ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ರಾತ್ರಿ ವಾಹನ ಚಾಲನೆಯ ವೇಳೆ ಎಚ್ಚರಿಕೆ ವಹಿಸಿ, ಸರಿಯಾದ ಲೈಟ್ ಬಳಕೆಯ ಮೂಲಕ ಸ್ವಯಂ ಹಾಗೂ ಇತರರ ಜೀವ ರಕ್ಷಣೆ ಮಾಡಬೇಕು ಎಂಬ ಸಂದೇಶವನ್ನು ನೀಡಲಾಯಿತು. ಸಾರ್ವಜನಿಕರ ಸುರಕ್ಷತೆಗಾಗಿ ಮುಂದಿನ ದಿನಗಳಲ್ಲಿಯೂ ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸುವುದಾಗಿ ಆಯೋಜಕರು ತಿಳಿಸಿದರು.