ಮಡಿಕೇರಿ, ಡಿ. ೩೧ : ದಿನಗಳು, ವಾರಗಳು, ತಿಂಗಳು, ವರ್ಷವೇ ಉರುಳಿ ಹೋಗುತ್ತಿರುತ್ತವೆ. ವರ್ಷಾಂತ್ಯದ ದಿನÀ ಎದುರಾದಾಗ ಬಹುತೇಕ ಜನರು ಕಳೆದ ವರ್ಷ ಹೊಸ ವರ್ಷಾಚರಣೆ ಮಾಡಿದ್ದು ನೆನಪಿನಂಗಳದಲ್ಲಿ ಹಾಗೇ ಉಳಿದಿದೆ. ಇದೇನಪ್ಪಾ ಒಂದು ವರ್ಷ ಇಷ್ಟು ಬೇಗನೇ ಕಳೆದು ಹೋಯಿತೆ ಎಂದು ಮಾತನಾಡಿಕೊಳ್ಳುತ್ತಾರೆ. ಹೌದು ೨೦೨೫ನೇ ವರ್ಷವೂ ಇದರಂತೇ ಇತಿಹಾಸದ ಪುಟ ಸೇರಿದೆ. ಕೇವಲ ೨೦೨೫ನೇ ವರ್ಷ ಮಾತ್ರವಲ್ಲ ೨೦೦೦ದ ಶತಮಾನದಲ್ಲಿನ ೨೫ ವರ್ಷಗಳೂ ಇಂದಿಗೆ ಮರೆಯಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ೨೦೨೫ರ ವರ್ಷ ಹಲವು ಸಿಹಿ-ಕಹಿ ಘಟನೆಗಳು, ಅಪ್ರಸ್ತುತವಾದ ವಾದ - ವಿವಾದಗಳು, ಪ್ರಾಕೃತಿಕವಾಗಿ ಎದುರಾದ ಹಿಂದಿನ ವರ್ಷಗಳಿಗಿಂತ ವಿಭಿನ್ನ ರೀತಿಯ ಸನ್ನಿವೇಶಗಳ ನಡುವೆ ಸರಿಯುತ್ತಿದೆ. ಬೇರೆ ವಿಚಾರ - ಘಟನಾವಳಿಗಳ ನಡುವೆ ಈ ಬಾರಿ ವಿಶೇಷವಾಗಿ ಮಳೆ- ಚಳಿಯ ವಾತಾವರಣ ಜನತೆಗೆ ಒಂದಷ್ಟು ನೆನಪಿನಲ್ಲಿ ಉಳಿಯುವಂತದ್ದು. ಅಂತೂ... ಇಂತೂ ವರ್ಷ ಸರಿದು ಹೊಸ ವರುಷ (ಕ್ಯಾಲೆಂಡರ್ ವರ್ಷ) ಎದುರಾಗಿದೆ. ೨೦೨೬ ಎಲ್ಲರಿಗೂ ಸಂತೋಷದಾಯಕವಾಗಿರಲಿ... ಎಲ್ಲರೂ ಶಾಂತಿ ನೆಮ್ಮದಿಯ ಜೀವನ ಸಾಗಿಸಲಿ ಎಂಬದು ‘ಶಕ್ತಿ’ಯ ಆಶಯ.
ಸರಿದ ವರ್ಷಕ್ಕೆ ವಿದಾಯದೊಂದಿಗೆ ಜನತೆ ಸಂಭ್ರಮ - ಸಡಗರ, ಮೋಜು ಮಸ್ತಿ, ಹೊಸ ನಿರೀಕ್ಷೆಗಳೊಂದಿಗೆ ೨೦೨೬ರ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಎಲ್ಲರಿಗೂ ‘ಹ್ಯಾಪಿ ನ್ಯೂ ಇಯರ್’ ೨೦೨೬.
-ಶಶಿ ಸೋಮಯ್ಯ