ಹೆಚ್.ಜೆ. ರಾಕೇಶ್

ಮಡಿಕೇರಿ, ಡಿ. ೩೦: ೨೦೦೧ರ ನೆಲ್ಲಮಕ್ಕಡ ಕಪ್‌ನಲ್ಲಿ ಫೈನಲ್ ತಲುಪಿದರೂ ವಿಜಯಶಾಲಿಯಾಗಲು ಸಾಧ್ಯವಾಗಿರಲಿಲ್ಲ. ನಂತರದಲ್ಲಿ ಚೆಕ್ಕೆರ ಕಪ್, ಮಚ್ಚಮಾಡ ಕಪ್, ಕಳ್ಳಿಚಂಡ ಕಪ್, ಕುಂಡ್ಯೋಳAಡ ಕಪ್‌ಗಳಲ್ಲಿ ಪ್ರಿ ಕಾರ್ಟರ್, ಕ್ವಾರ್ಟರ್ ಫೈನಲ್‌ಗೆ ಬಂದರೂ ಮುಗ್ಗರಿಸಬೇಕಾಯಿತು. ಕಳೆದ ವರ್ಷದ ಮುದ್ದಂಡ ಕಪ್‌ನಲ್ಲೂ ಕ್ವಾರ್ಟರ್ ಫೈನಲ್‌ನಲ್ಲಿ ರೋಚಕ ಆಟವಾಡಿದರೂ ಮತ್ತೆ ನಿರಾಶೆ ಅನುಭವಿಸಿದ್ದು ಚೆಪ್ಪುಡಿರ ಕುಟುಂಬದ ಕೌಟುಂಬಿಕ ಹಾಕಿಯಲ್ಲಿನ ಪರಿಶ್ರಮದ ಹಿಂದಿನ ಚಿತ್ರಣ...

ಆದರೆ, ಇದೀಗ ಚೊಚ್ಚಲ ಬಾರಿಗೆ ಕಳೆದ ೨೫ ವರ್ಷಗಳ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವಿಜೇತರು, ರನ್ರ‍್ಸ್ ತಂಡಗಳ ನಡುವೆ ಏರ್ಪಡಿಸಿದ್ದ ಲೆವಿಸ್ಟಾ ಚಾಂಪಿಯನ್ ಟ್ರೋಫಿಯಲ್ಲಿ ಚೆಪ್ಪುಡಿರ ಕುಟುಂಬ ವಿಜಯದ ನಗು ಬೀರುವಲ್ಲಿ ಯಶಸ್ಸು ಕಂಡಿದೆ. ಕೊಡವ ಹಾಕಿ ಅಕಾಡೆಮಿಯ ವತಿಯಿಂದ ಮೊದಲ ಬಾರಿಗೆ ೨೫ ವರ್ಷಗಳ ನೆನಪಿನÀಲ್ಲಿ ಆಯೋಜಿಸಲಾಗಿದ್ದ ಲೆವಿಸ್ಟಾ ಚಾಂಪಿಯನ್ಸ್ ಟ್ರೋಫಿ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಚೆಪ್ಪುಡಿರ ತಂಡ ಫೈನಲ್‌ನಲ್ಲಿ ಹಲವು ಬಾರಿಯ ಕೌಟುಂಬಿಕ ಹಾಕಿ ಪ್ರಶಸ್ತಿ ವಿಜೇತ ಕುಲ್ಲೇಟಿರ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್‌ಗಳಿಗೆ ಚಾಂಪಿಯನ್ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿತು. ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಹಲವು ವಿಶೇಷತೆಗಳೊಂದಿಗೆ ಜರುಗಿದ ಪಂದ್ಯಾವಳಿಯ ಫೈನಲ್ ತಲುಪಿದ್ದ ಮತ್ತೊಂದು ಕುಟುಂಬ ಕುಲ್ಲೇಟಿರ ವಿರೋಚಿತ ಸೋಲು ಕಾಣುವಂತಾಗಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ಅಂತಿಮ ಹಣಾಹಣಿ

ಕುಲ್ಲೇಟಿರ ಹಾಗೂ ಚೆಪ್ಪುಡಿರ ತಂಡಗಳ ನಡುವಿನ ಅಂತಿಮ ಹಣಾಹಣಿ ನೋಡುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ೧-೦ ಗೋಲುಗಳ ಅಂತರದಲ್ಲಿ ಕುಲ್ಲೇಟಿರ ತಂಡವನ್ನು ಮಣಿಸಿ ಚೆಪ್ಪುಡಿರ ಗೆಲುವಿನ ನಗೆ ಬೀರಿತು. ತಲಾ ೧೫ ನಿಮಿಷಗಳ ೪ ಅವಧಿಗಳ ಪಂದ್ಯಾವಳಿಯಲ್ಲಿ ಉಭಯ ತಂಡಗಳು ರೋಚಕ ಹಣಾಹಣಿ ನಡೆಸಿದವು. ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲಿಗಾಗಿ ಸೆಣಸಾಡಿದರು ಗೋಲುಗಳಿಸುವಲ್ಲಿ ವಿಫಲವಾದವು. ಪ್ರಾರಂಭದಲ್ಲಿ ಚೆಪ್ಪುಡಿರ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರು ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಆಟಗಾರರು ವಿಫಲರಾದರು. ೨ನೇ ಕ್ವಾರ್ಟರ್‌ನಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಚೆಪ್ಪುಡಿರ ತಂಡದ ಆಟಗಾರ ಚೇತನ್ ಸೋಮಣ್ಣ ಗೋಲು ಗಳಿಸಿ ತಂಡದ ಖಾತೆ ತೆರೆದರು. ಬಳಿಕ ಆಟದ ವೇಗವನ್ನು ಕುಲ್ಲೇಟಿರ ಹೆಚ್ಚಿಸಿಕೊಂಡು ಗೋಲು ಗಳಿಸುವ ಪ್ರಯತ್ನ ಮಾಡಿದರೂ ಎದುರಾಳಿ ತಂಡ ಅದಕ್ಕೆ ಅವಕಾಶ ನೀಡದೆ ಕಟ್ಟಿ ಹಾಕಿತು. ಚೆಪ್ಪುಡಿರ ತಂಡಕ್ಕೆ ೩ನೇ ಕ್ವಾರ್ಟರ್‌ನಲ್ಲಿ ೪ ಪೆನಾಲ್ಟಿ ಕಾರ್ನರ್ ಅವಕಾಶ ದೊರೆತರೂ ಕುಲ್ಲೇಟಿರ ಆಟಗಾರರು ಹಾಗೂ ಗೋಲಿ ರಕ್ಷಣಾತ್ಮಕ ಆಟದ ಮೂಲಕ ಗೋಲು ಗಳಿಸುವುದಕ್ಕೆ ತಡೆಯೊಡ್ಡಿದರು. ಕುಲ್ಲೇಟಿರ ಗೋಲಿಗಾಗಿ ನಡೆಸಿದ ಪ್ರಯತ್ನವನ್ನು ಎದುರಾಳಿ ಆಟಗಾರರು ವಿಫಲಗೊಳಿಸುತ್ತಿದ್ದರು. ಅಂತಿಮ ಸುತ್ತು ಅತ್ಯಂತ ರೋಚಕತೆಯಿಂದ ಕೂಡಿತ್ತು. ಶತಾಯಗತಯ ಗೋಲು ಗಳಿಸಲೆಬೇಕೆಂಬ ಹಠ ತೊಟ್ಟಿದ್ದ ಕುಲ್ಲೇಟಿರ ಆಟಗಾರರು ಮಿಂಚಿನ ವೇಗದಲ್ಲಿ ತೆರಳಿ ಗೋಲು ಗಳಿಸುವ ಪ್ರಯತ್ನ ನಡೆಸುತ್ತಿದ್ದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆದರೆ, ಚೆಪ್ಪುಡಿರ ಇದಕ್ಕೆ ಅವಕಾಶ ನೀಡಲಿಲ್ಲ. ವರದಾನವಾಗಿ ಬಂದ ೨ ಪೆನಾಲ್ಟಿಯ ಅವಕಾಶವನ್ನು ಕೈಚೆಲ್ಲಿದರು. ಅಂತಿಮವಾಗಿ ಚೆಪ್ಪುಡಿರ ಏಕೈಕ ಗೋಲಿನ ಗೆಲುವು ತನ್ನದಾಗಿಸಿಕೊಂಡಿತು. ತೀರ್ಪುಗಾರರಾಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ, ಅನ್ನಾಡಿಯಂಡ ಪೊನ್ನಣ್ಣ ಕಾರ್ಯನಿರ್ವಹಿಸಿದರು. ತಾಂತ್ರಿಕ ವಿಭಾಗದಲ್ಲಿ ಪುದಿಯೊಕ್ಕಡ ವಿಪನ್ ಸೋಮಯ್ಯ, ಬೊಳಿಯಾಡಿರ ಶಶಾಂಕ್ ಸುಬ್ಬಯ್ಯ, ಅಯ್ಯನೆರವಂಡ ತನುಶ್ ನಾಚಪ್ಪ, ಬಲ್ಲಚಂಡ ಸಜನ್ ಗಣಪತಿ ಇದ್ದರು. ಮಾಳೇಟಿರ ಶ್ರೀನಿವಾಸ್, ಅಜ್ಜೇಟಿರ ವಿಕ್ರಂ ಉತ್ತಪ್ಪ ವೀಕ್ಷಕ ವಿವರಣೆ ನೀಡಿದರು. ಪಂದ್ಯಾಟದ ಮಧ್ಯದಲ್ಲಿ ಮೂರ್ನಾಡು ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಉಮ್ಮತಾಟ್ ಪ್ರದರ್ಶನ ನಡೆಯಿತು.

ವಾರ್ಷಿಕ ಕೊಡವ ಕೌಟುಂಬಿಕ ಹಾಕಿ ಉತ್ಸವದ ಮಾದರಿಯಲ್ಲೇ ಕೊಡವ ಹಾಕಿ ಅಕಾಡೆಮಿ ಮೊದಲ ಪ್ರಯತ್ನವಾಗಿ ಚಾಂಪಿಯನ್ ಟ್ರೋಫಿ ಪಂದ್ಯಾವಳಿಯನ್ನು ಆಯೋಜಿಸಿದ್ದು ಯಶಸ್ಸು ಕಂಡಿತು. ವಾರ್ಷಿಕ ಹಾಕಿ ಉತ್ಸವವಲ್ಲದಿದ್ದರೂ ಮಿನಿ ಉತ್ಸವದಂತೆ ಈ ಪಂದ್ಯಾವಳಿಯೂ ಶಿಸ್ತುಬದ್ಧವಾಗಿ, ಅದ್ದೂರಿತನದೊಂದಿಗೆ ಜನಮನ ಸೆಳೆಯಿತು.

ಅಧಿಕ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳೂ ಪಾಲ್ಗೊಂಡಿದ್ದರು. ಮೂರ್ನಾಡಿನಲ್ಲಿ ಇದೇ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಗಮನ ಸೆಳೆದಿದ್ದು ವಿಶೇಷವಾಗಿತ್ತು.