ಸೋಮವಾರಪೇಟೆ, ಜ. ೧ : ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪ ವ್ರತಧಾರಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಮಂಡಲ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಕ್ಷೇತ್ರದಲ್ಲಿ ಅರ್ಚಕ ಜಗದೀಶ ಉಡುಪ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮದೊಂದಿಗೆ ಪೂಜೆಗಳು ಆರಂಭಗೊAಡವು. ನಂತರ ಪವಿತ್ರ ತುಪ್ಪವನ್ನು ಅಯ್ಯಪ್ಪಸ್ವಾಮಿಗೆ ಅಭಿಷೇಕ ಮಾಡಲಾಯಿತು. ಅಯ್ಯಪ್ಪಸ್ವಾಮಿಯ ಆಭರಣಗಳಿಗೆ ಪೂಜೆ ಸಲ್ಲಿಸಿ ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಮಾಡಲಾಯಿತು.

ಉಚ್ಛ ಪೂಜೆಯಲ್ಲಿ ಅಯ್ಯಪ್ಪಸ್ವಾಮಿಯ ಮೂರ್ತಿಯನ್ನು ವಿಶೇಷವಾದ ಆಭರಣಗಳೊಂದಿಗೆ ಅಲಂಕರಿಸಿ ಪೂಜೆ ಸಲ್ಲಿಸ ಲಾಯಿತು. ಸಂಜೆ ಅಯ್ಯಪ್ಪ ವ್ರತಧಾರಿಗಳು ಮತ್ತು ಭಕ್ತರ ಭಜನೆಯೊಂದಿಗೆ ಪಡಿಪೂಜೆ ನೆರವೇರಿತು. ಪುಷ್ಪಾಭಿಷೇಕದ ನಂತರ ಮಹಾಮಂಗಳಾರತಿ, ಅನ್ನದಾನ ನಡೆಯಿತು. ಪೂಜಾ ಕೈಂಕರ್ಯವನ್ನು ಅರ್ಚಕರಾದ ವೆಂಕಟೇಶ್ ಹೊಳ್ಳ, ವಾದಿರಾಜ್, ಹರಿಭಟ್ ನೆರವೇರಿಸಿದರು. ಬಜೆಗುಂಡಿ ಮಣಿಸ್ವಾಮಿ ಸಹಕಾರ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್, ಉಪಾಧ್ಯಕ್ಷ ರಾಜೇಂದ್ರನ್, ಖಜಾಂಚಿ ಎನ್.ಜಿ. ಮೋಹನ್, ಸಹ ಕಾರ್ಯದರ್ಶಿ ಕೆ.ಸಿ. ದಿನೇಶ್ ಮತ್ತು ಸದಸ್ಯರುಗಳು, ಮುತ್ತಪ್ಪಸ್ವಾಮಿ ದೇವಾಲಯದ ಅರ್ಚಕ ಸುಧೀಶ್ ಇದ್ದರು.