ಸೋಮವಾರಪೇಟೆ, ಜ. ೨: ಸಣ್ಣ ನೀರಾವರಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೃಷಿಕರಿಗೆ ರೂ. ೫ಲಕ್ಷ ವೆಚ್ಚದಲ್ಲಿ ಉಚಿತ ಕೊಳವೆ ಬಾವಿ ಕೊರೆಸುವ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಡಾ. ಮಂತರ್ ಗೌಡ ಅವರು ಆದೇಶ ಪತ್ರ ವಿತರಿಸಿದರು.

ಶಾಸಕರ ಕಚೇರಿ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಸಣ್ಣ ರೈತರು ನೀರಾವರಿಯೊಂದಿಗೆ ಕೃಷಿ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ. ಕಳೆದ ೫ ವರ್ಷಗಳಿಂದ ಯಾವುದೇ ಯೋಜನೆ ಜಿಲ್ಲೆಗೆ ಬಂದಿರಲಿಲ್ಲ. ಸಣ್ಣ ನೀರಾವರಿ ಸಚಿವರು ಹಾಗೂ ಕೊಡಗು ಉಸ್ತುವಾರಿ ಸಚಿವರಾದ ಬೋಸ್‌ರಾಜ್ ಅವರ ವಿಶೇಷ ಆಸಕ್ತಿಯಿಂದ ಯೋಜನೆ ಪ್ರಸಕ್ತ ವರ್ಷ ಜಾರಿಗೆ ಬಂದಿದೆ ಎಂದರು.

ಈ ಬಾರಿ ಕ್ಷೇತ್ರದ ೫೦ ಕೃಷಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃಷಿಕರಿಗೆ ಕೊಳವೆಬಾವಿ ನಿರ್ಮಿಸಿಕೊಳ್ಳಲು ಅನುದಾನ ಒದಗಿಸಲಾಗುವುದು. ಕನಿಷ್ಟ ಅರ್ಧ ಏಕರೆ ಕೃಷಿ ಭೂಮಿಯನ್ನು ಹೊಂದಿರುವ, ಬೇರಾವುದೇ ಯೋಜನೆಯಡಿ ಕೊಳವೆಬಾವಿ ಪಡೆದಿರದ ರೈತರು ಈ ಯೋಜನೆಗೆ ಒಳಪಡಲಿದ್ದಾರೆ ಎಂದು ತಿಳಿಸಿದರು. ಯಾವುದೇ ರೈತರು ಕೊಳವೆಬಾವಿ ತೆಗೆಸಲು ಅಧಿಕಾರಿಗಳಿಗೆ ಹಣ ನೀಡಬಾರದು. ಮುಂದಿನ ಒಂದು ತಿಂಗಳ ಒಳಗೆ ಎಲ್ಲ ಕೊಳವೆ ಬಾವಿಗಳನ್ನು ಕೊರೆಸಿ, ಮೋಟಾರ್ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಇಲಾಖಾಧಿಕಾರಿ ಕುಮಾರಸ್ವಾಮಿ ಅವರಿಗೆ ಸೂಚಿಸಿದರು. ಪ್ರತಿ ಬಾವಿಯನ್ನು ೪೦೦ ಅಡಿಯವರೆಗೆ ಕೊರೆಸಲು ಅವಕಾಶ ಇದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಬಿ.ಬಿ. ಸತೀಶ್, ಜೆ.ಎಲ್ ಜನಾರ್ಧನ, ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಎಚ್.ಆರ್. ಸುರೇಶ್ ಇದ್ದರು.