ಐಗೂರು, ಜ. ೨: ಐಗೂರಿನ ಚೋರನ ಹೊಳೆಗೆ ಕಿರಗಂದೂರು ಭಾಗದಿಂದ ಕಾಫಿ ಪಲ್ಪರ್ ಮಾಡಿದ ನೀರು ಹರಿದು ಬಂದು ಹೊಳೆಯ ನೀರಿಗೆ ಮಿಶ್ರಣವಾಗಿ ನೀರು ಕಲುಷಿತಗೊಂಡಿದೆ. ಈ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ನಂತರ ಐಗೂರಿನ ಗ್ರಾಮಸ್ಥರು ಹೊಳೆಯ ಬದಿಯಲ್ಲಿ ಜಮಾವಣೆಗೊಂಡು ನೀರಿನಲ್ಲಿ ಸಾವನ್ನಪ್ಪಿ ತೇಲಾಡುತ್ತಿದ್ದ ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ವೀಕ್ಷಿಸಿ, ಜನರ ಜೀವನಾ ಧಾರವಾಗಿರುವ ಹೊಳೆ ವಿಷದ ಕೂಪವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬAತು.
ಜಲಚರಗಳ ಮಾರಣ ಹೋಮ ನಡೆಯುತ್ತಿದ್ದು ಪತ್ರಿಕೆ ಗಳಲ್ಲಿ ಕಾಫಿ ನೀರಿನ ವರದಿ ಬಂದ ನಂತರವೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತದ ಇಲಾಖೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಲುಷಿತಗೊಂಡ ನೀರಿನಲ್ಲಿ ಸ್ಥಳೀಯ ನಿವಾಸಿಗಳ ಬಾತುಕೋಳಿಗಳು ಆಹಾರವನ್ನು ಅರಸಿಕೊಂಡು ಈಜಾಡುತಿದ್ದು ಬಾತುಕೋಳಿಗಳ ಪ್ರಾಣಕ್ಕೂ ಕಂಟಕವಾಗುವುದರ ಜೊತೆಗೆ ಜನರ ಜೀವಕ್ಕೂ ಹಾನಿ ಸಂಭವಿಸಬಹುದು. ಶಬರಿಮಲೆಗೆ ಹೋಗುವ ವ್ರತಧಾರಿ ಮಾಲಾಧಾರಿಗಳು ಸ್ನಾನಕ್ಕೆಂದು ಹೊಳೆಗೆ ತೆರಳಿ ನೀರಿನ ದುರ್ವಾಸನೆಯನ್ನು ಕಂಡು ಮರಳಿ ಮನೆಗೆ ಬಂದಿದ್ದಾರೆ. ಸೇತುವೆಗೆ ಪರ್ಯಾಯ ಮಾರ್ಗವಾಗಿ ನಿರ್ಮಿಸಿದ ಕಿರು ಸೇತುವೆಯಲ್ಲಿ ಜನರು ಸಂಚರಿಸುವಾಗ ನೀರಿನ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ತೆರಳಬೇಕಾಗಿದೆ. ಐಗೂರು ವ್ಯಾಪ್ತಿಯಿಂದ ಯಡವಾರೆ, ಹಾರಂಗಿ ಹಿನ್ನೀರಿನ ಪ್ರದೇಶದವರೆಗಿನ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೊಳೆಯ ನೀರನ್ನೇ ಬಳಸುತ್ತಿದ್ದಾರೆ. ಕಲುಷಿತಗೊಂಡ ನೀರಿನಿಂದ ಗ್ರಾಮಸ್ಥರಿಗೆ ಈಗ ನೀರಿನ ಸಮಸ್ಯೆ ತಲೆದೋರಿದೆ. ಈಗಾಗಲೇ ಐಗೂರಿನ ನೂತನ ಸೇತುವೆಯ ಕಾಮಗಾರಿ ಕೆಲಸ ಪ್ರಾರಂಭವಾಗಿದ್ದು, ಸೇತುವೆಯ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ತಳಭಾಗದಲ್ಲಿ ಸಿಮೆಂಟ್ ಪಿಲ್ಲರ್‌ಗಳನ್ನು ನಿರ್ಮಿಸುವ ಕೆಲಸ ಪ್ರಾರಂಭದ ಹಂತದಲ್ಲಿದೆ. ಸಿಮೆಂಟಿನ ಪಿಲ್ಲರ್ ಗಳನ್ನು ನಿರ್ಮಿಸುವಾಗ ಕಾಫಿ ಮಿಶ್ರಣದ ಹೊಳೆಯ ನೀರನ್ನೇ ಬಳಸಬೇಕಾಗುತ್ತದೆ. ಸಿಮೆಂಟನ್ನು ದುರ್ಬಲಗೊಳಿಸುವ ಸಾಮರ್ಥ್ಯವಿರುವ ಅಪಾಯಕಾರಿ ನೀರನ್ನು ಸೇತುವೆಯ ಕಾಮಗಾರಿಗೆ ಬಳಸಿದರೆ ರೂ. ೧೦ ಕೋಟಿ ವೆಚ್ಚದ ಸೇತುವೆ ಕಾಮಗಾರಿ ಕೆಲಸ ದುರ್ಬಲಗೊಂಡು ಕೆಲಸ ಕಳಪೆಯಾಗುತ್ತದೆ ಎಂದು ಸ್ಥಳೀಯ ತಜ್ಞ ಬೆಳೆಗಾರರು ತಮ್ಮ ಅನಿಸಿಕೆಗಳನ್ನು ಹಂಚಿಕೊAಡಿದ್ದಾರೆ. ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
- ಸುಕುಮಾರ್.