ವೀರಾಜಪೇಟೆ, ಜ. ೨: : ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಪೆರುಂಬಾಡಿಯಲ್ಲಿನ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಅಯ್ಯಪ್ಪ ಮಂಡಲ ಪೂಜೆ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ದೇವಾಲಯವನ್ನು ತಳಿರು ತೋರಣ, ವಿವಿಧ ಬಗೆಯ ಬಣ್ಣದ ಹೂವು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗಣಪತಿ ಹೋಮ, ಎಳನೀರು ಅಭಿಷೇಕ, ಚಂಡೇಮೇಳ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, ಲಕ್ಷಾರ್ಚನೆ, ಪಲ್ಲಕ್ಕಿ ಪೂಜೆ ಮತ್ತು ಮಹಾಪೂಜೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಮಂದಿರ ಮುಂಭಾಗದಿAದ ಶ್ರೀ ಅಯ್ಯಪ್ಪನ ಉತ್ಸವ ಮೂರ್ತಿ ವಿದ್ಯುತ್ ಅಲಂಕೃತ ಮಂಟಪದೊAದಿಗೆ ಮೆರವಣಿಗೆ ನಡೆಯಿತು. ಮಹಿಳೆಯರು ಸೇರಿದಂತೆ ಮಕ್ಕಳ ತಾಲಾಪೊಲಿ, ಅಯ್ಯಪ್ಪ ವ್ರತಧಾರಿಗಳ ಕಲಶ ಮೆರವಣಿಗೆ, ಚಂಡೆ ವಾದ್ಯಗಳೊಂದಿಗೆ ಜರುಗಿತು.
ಮೆರವಣಿಗೆಯು ಸಮೀಪದ ಚಾಮುಂಡಿ ಮಾಳದಲ್ಲಿರುವ ಚಾಮುಂಡಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಅಯ್ಯಪ್ಪ ದೇವಾಲಯಕ್ಕೆ ಹಿಂದಿರುಗಿತು. ಬಳಿಕ ಹದಿನೆಂಟು ಮೆಟ್ಟಿಲು ಪೂಜೆ, ಮಹಾಪೂಜೆ ನಡೆಯಿತು.
ಅಪಾರ ಸಂಖ್ಯೆಯಲ್ಲಿದ್ದ ಭಕ್ತರಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ಆಡಳಿತ ಮಂಡಳಿಯ ಸದಸ್ಯರುಗಳು ಮತ್ತು ಇತರರು ಇದ್ದರು.