ಸಿದ್ದಾಪುರ, ಜ. ೨: ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಗುಹ್ಯ ಗ್ರಾಮದ ನೇತಾಜಿ ಬಡಾವಣೆ ನಿವಾಸಿಗಳು ಖಾಲಿ ಕೊಡಗಳೊಂದಿಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎನ್.ಕೆ. ಅನಿಲ್ ಮಾತನಾಡಿ, ಬಡಾವಣೆಯಲ್ಲಿ ನೂರಾರು ಮಂದಿ ವಾಸಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ದೂರು ನೀಡಿದರು ಯಾವುದೇ ಸ್ಪಂದನ ದೊರೆತ್ತಿಲ್ಲ.ದಾನಿ ಒಬ್ಬರು ನೀಡಿದ ಜಾಗದಲ್ಲಿ ಕೊಳವೆ ಬಾವಿಯನ್ನು ತೆಗೆಯಲಾಗಿದೆ. ಆದರೆ ಇದಕ್ಕೆ ವಿದ್ಯುತ್ ಸಂಪರ್ಕ ಒದಗಿಸದೆ ನಿರ್ಲಕ್ಷö್ಯ ವಹಿಸಲಾಗಿದೆ. ನೀರಿನ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪನ್ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕೆಲವೊಂದು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವದು ಎಂದು ಹೇಳಿದರು.

ಮನವಿ ಪತ್ರವನ್ನು ಸ್ವೀಕರಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಆರ್. ಆಶಾ ಕುಮಾರಿ ಮನವಿ ಪತ್ರವನ್ನು ಸ್ವೀಕರಿಸಿ ಮುಂದಿನ ೧೫ ದಿನಗಳ ಒಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ಭರವಸೆ ನೀಡಿದರು. ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ ಎಂದು ಪಿಡಿಓ ಮಾಹಿತಿ ನೀಡಿದರು. ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ವೈಜು, ಪರಶುರಾಮ, ಹೆಚ್.ಬಿ. ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.