ಶನಿವಾರಸಂತೆ, ಜ. ೨: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಂದಿಪುರ ಕೆರೆಯ ಹತ್ತಿರ ಇರುವ ಎರಡು ಮದ್ಯದ ಅಂಗಡಿ ಹಾಗೂ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಒಂದು ಮದ್ಯದ ಅಂಗಡಿಗೆ ಬರುವ ಗ್ರಾಹಕರು ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ತಂದು ಪಕ್ಕದಲ್ಲಿ ಇರುವ ರಸ್ತೆಯ ಅಂಚಿನಲ್ಲಿ ಒಡೆದು ಹಾಕಿ, ರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡುಬAದಿದೆ. ಮದ್ಯಪ್ರಿಯ ಗ್ರಾಹಕರ ಅಸಭ್ಯ ವರ್ತನೆ ರಸ್ತೆಯಲ್ಲಿ ತಿರುಗಾಡುವ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನು ಉಂಟು ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರವೇ ಕೊಡ್ಲಿಪೇಟೆ ಹೋಬಳಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿಗೆ ಹಾಗೂ ಕೊಡ್ಲಿಪೇಟೆ ಪೊಲೀಸ್ ಉಪ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿರುವ ಕರವೇ ವತಿಯಿಂದ ಹಾಕಿಸಿರುವ ಸಿಸಿ ಕ್ಯಾಮೆರಾ ಹಾಗೂ ಕುಡಿಯುವ ನೀರಿನ ಘಟಕದ ಫಿಲ್ಟರ್ ದುರಸ್ತಿಪಡಿಸುವಂತೆಯೂ, ರಸ್ತೆಯ ಎರಡೂ ಬದಿಯಲ್ಲು ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ಅನಾನುಕೂಲವಾಗುತ್ತಿರುವ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.
ಈ ಸಂದರ್ಭ ಕರವೇ ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷ ಕೆಂಚೇಶ್ವರ, ಕಾರ್ಯದರ್ಶಿ ಡಿ.ಆರ್. ವೇದಕುಮಾರ್, ಯುವ ಘಟಕದ ಅಧ್ಯಕ್ಷ ಡಿ.ಎನ್. ವಸಂತ್, ಸೋಮವಾರಪೇಟೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೇದಾವತಿ ವಿಷ್ಣುವರ್ಧನ್, ಕೊಡ್ಲಿಪೇಟೆ ಘಟಕದ ಉಪ ಕಾರ್ಯದರ್ಶಿ ಹೂವಮ್ಮ, ಪದಾಧಿಕಾರಿಗಳಾದ ಯೋಗಾನಂದ್, ಧರ್ಮಪ್ಪ, ಯೋಗೇಶ್, ರೂಪಾ, ರಾಜಣ್ಣ, ಇಂದ್ರೇಶ್, ಗಣೇಶ್ ಮತ್ತಿತರರು ಹಾಜರಿದ್ದರು.