ಮಡಿಕೇರಿ, ಜ. ೨: ಕೃಷಿ ಇಲಾಖೆ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ರೋಡ್ ಶೋ ಕಾರ್ಯಕ್ರಮ ತಾ. ೧೩ ರಂದು ಬೆಳಿಗ್ಗೆ ೭ ಗಂಟೆಗೆ ಉದ್ಘಾಟನೆಯಾಗಲಿದೆ. ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನವರೆಗೆ ಆಯೋಜಿಸಲಾಗಿದೆ.
ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಕೃಷಿ ಇಲಾಖೆಯಿಂದ ತಾ. ೧೩ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯರ್ಥಿಗಳು ತಾ. ೯ ರ ಸಂಜೆ ೫ ಗಂಟೆಯೊಳಗೆ ಖುದ್ದಾಗಿ ಸಂಬAಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು ಮತ್ತು ಸಾಮೆ ಬೆಳೆಗಳಿಂದ ಸಿಹಿ ಮತ್ತು ಖಾರ ಖಾದ್ಯಗಳನ್ನು ತಯಾರಿಸಲು ಅವಕಾಶವಿರುತ್ತದೆ. “ಮರೆತು ಹೋದ ಖಾದ್ಯಗಳು (ಲ್ಯಾಂಡ್ ರೇಸಸ್ ಪ್ರೋಡಕ್ಟ್) ದೇಸಿ ತಳಿಗಳ ಪೌಷ್ಟಿಕಾಂಶದ ಮೌಲ್ಯ, ಬಳಕೆಯಾಗದ ಬೆಳೆಗಳು, ಮರೆತುಹೋದ ಆಹಾರಗಳು, ರೈತರ ಸಾಂಪ್ರದಾಯಿಕ, ಪರಂಪರೆ, ಜಾನಪದ ಪ್ರಭೇದಗಳು ಎಂದು ಕರೆಯಲ್ಪಡುವ ದೇಸಿ ತಳಿಗಳು, ಸ್ಥಳೀಯ ಅಥವಾ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಅಭಿವೃದ್ಧಿ/ ನಿರ್ವಹಿಸಲ್ಪಡುವ ವಿಶಿಷ್ಟ ಗುಣಲಕ್ಷಣಗಳು, ಪೋಷಕಾಂಶಗಳಲ್ಲಿ ಸಮೃದ್ಧ ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ಕೆಲವೇ ರೈತರು ಬೆಳೆಯುವ ದೇಸಿ ತಳಿಗಳಿಂದ ತಯಾರಿಸುವ ಖಾದ್ಯಗಳು.
ಮರೆತು ಹೋದ ಖಾದ್ಯಗಳಡಿ ಸಿರಿಧಾನ್ಯಗಳನ್ನು ಹೊರತುಪಡಿಸಿ ಇತರೆ ದೇಸಿ ತಳಿಗಳಡಿ ಬರುವ ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳ, ತರಕಾರಿ ಮತ್ತು ಹಣ್ಣುಗಳ ಇತ್ಯಾದಿ ಖಾದ್ಯಗಳನ್ನು ತಯಾರಿಸಬೇಕು. ಸ್ಪರ್ಧಿಗಳು ಖಾದ್ಯಗಳನ್ನು ಮುಂಚಿತವಾಗಿಯೇ ತಯಾರಿಸಿಕೊಂಡು ಪ್ರದರ್ಶನಕ್ಕೆ ತರಬೇಕು. ತಯಾರಿಸಿದ ತಿನಿಸುಗಳ ರುಚಿ, ಪ್ರದರ್ಶನ, ಬಳಸಿದ ಸಾಮಗ್ರಿಗಳ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು. ತೀರ್ಪುದಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
ಜಿಲ್ಲಾಮಟ್ಟಕ್ಕೆ ಖಾರ ತಿನಿಸು, ಸಿಹಿ ತಿನಿಸು ಮತ್ತು ಮರೆತು ಹೋದ ಖಾದ್ಯಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನವಾಗಿ ರೂ. ೫ ಸಾವಿರ, ದ್ವಿತೀಯ ಬಹುಮಾನವಾಗಿ ರೂ. ೩ ಸಾವಿರ ಹಾಗೂ ತೃತೀಯ ಬಹುಮಾನವಾಗಿ ರೂ. ೨ ಸಾವಿರಗಳನ್ನು ನೀಡಲಾಗುವುದು. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ. (ವಿದ್ಯಾರ್ಥಿಗಳು/ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ).
ಹೆಚ್ಚಿನ ಮಾಹಿತಿಗೆ ಹಾಗೂ ಪಾಕ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಆಯಾಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ತಾಲೂಕು ತಾಂತ್ರಿಕ ವ್ಯವಸ್ಥಾಪಕರು ವೀರಾಜಪೇಟೆ ೯೪೮೩೬೫೬೬೪೩, ಸೋಮವಾರಪೇಟೆ ೯೧೦೮೭೫೮೬೫೪, ಮಡಿಕೇರಿ ೯೭೩೧೬೯೩೪೮೪ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಉಪ ಯೋಜನಾ ನಿರ್ದೇಶಕರು ೯೪೮೨೩೭೧೦೧೬ ಇವರುಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ ತಿಳಿಸಿದ್ದಾರೆ.