ಕಣಿವೆ, ಜ. ೨: ಯುವಜನಾಂಗ ಮಾದಕ ವಸ್ತುಗಳಿಂದ ದೂರುವಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದರು.

ಕುಶಾಲನಗರದ ಆರ್ಯವೈಶ್ಯ ಸಮಾಜದ ವತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿಯ ಕಾಲ್ನಡಿಗೆ ಹಾಗೂ ಸೈಕ್ಲಿಂಗ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಹತ್ತನೇ ತರಗತಿ ಹಾಗೂ ಪಿಯು ಶಿಕ್ಷಣದ ಆಸುಪಾಸಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಮಾದಕ ವ್ಯಸನಕ್ಕೆ ತುತ್ತಾಗುತ್ತಿದ್ದು, ತಮ್ಮ ಅಮೂಲ್ಯವಾದ ಆರೋಗ್ಯ ಹಾಗೂ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ.

ಮನುಷ್ಯನಿಗೆ ಒಳ್ಳೆಯ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದು ಇಲ್ಲ. ಇದರ ಬಗ್ಗೆ ಯುವ ಜನಾಂಗ ಹಾಗೂ ವಿದ್ಯಾರ್ಥಿಗಳು ಮೊದಲು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸಕ್ಕೆ ಏಕಾಗ್ರತೆ ರೂಢಿಸಿಕೊಳ್ಳಬೇಕಿದೆ. ಮಾದಕ ವ್ಯಸನಗಳು ವ್ಯಕ್ತಿಯೊಬ್ಬನಿಗೆ ಮಾತ್ರ ಮಾರಕವಲ್ಲ. ಅದು ಇಡೀ ಕುಟುಂಬ ಹಾಗೂ ಸಮಾಜಕ್ಕೆ ಆಪತ್ತು. ಉತ್ತಮ ಹವ್ಯಾಸಗಳೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯುವ ಶಕ್ತಿ ಮುಂದಾಗಬೇಕು ಎಂದು ಕರೆ ನೀಡಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರದ ಅಭಿವೃದ್ಧಿಗೆ ಆರ್ಯವೈಶ್ಯ ಸಮಾಜದ ಕೊಡುಗೆ ಅಪಾರವಾಗಿದೆ. ನಗರದ ಖಾಸಗಿ ಬಸ್ ನಿಲ್ದಾಣ, ಸರ್ಕಾರಿ ಪಾಲಿಟೆಕ್ನಿಕ್, ಇಂಜಿನಿಯರಿAಗ್ ಕಾಲೇಜು ಹೀಗೆ ಅನೇಕ ಶಿಕ್ಷಣ ಸಂಸ್ಥೆಗಳ ಜಾಗ ಆರ್ಯವೈಶ್ಯ ಸಮಾಜದ ಹಿರಿಯರು ನೀಡಿದ ಬಳುವಳಿಯಾಗಿದೆ. ಜಾತಿಯೊಂದಕ್ಕೆ ಸೀಮಿತವಾಗದ ಸಮಾಜ ಸರ್ವ ಜನರ ಒಳಿತಿಗಾಗಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ರೂಪಿಸಿರುವುದು ಹೆಮ್ಮೆಯ ಸಂಗತಿ. ಮಾದಕ ವ್ಯಸನ ಎಂಬುದು ಸಾಮಾಜಿಕ ಪಿಡುಗು ಆಗಿದ್ದು, ಇದರ ವಿರುದ್ದ ಜನಜಾಗೃತಿ ಅಗತ್ಯ ಎಂದು ಪ್ರತಿಪಾದಿಸಿದರು.

ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಭವಿಷ್ಯದ ಭಾರತವನ್ನು ಬಲಿಷ್ಠವಾಗಿ ಕಟ್ಟಬೇಕಾದ ಯುವ ಶಕ್ತಿ ಇಂದು ದುಶ್ಚಟಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವ್ಯಸನಗಳ ವಿರುದ್ಧ ಶಾಲಾ ಕಾಲೇಜು ಹಂತದಿAದಲೇ ಮಕ್ಕಳಲ್ಲಿ ಅರಿವು ಮೂಡಿಸುತ್ತಿರುವ ಆರ್ಯವೈಶ್ಯ ಸಮಾಜದ ಸಾಮಾಜಿಕ ಸೇವೆ ಶ್ಲಾಘನೀಯ. ಇಂತಹ ಕಾರ್ಯಗಳಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಸಂಘಟನೆಗಳು ಮುಂದೆ ಬಂದು ಜನರಲ್ಲಿ ಅರಿವು ಮೂಡಿಸಬೇಕೆಂದು ಎಂದು ಸಲಹೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು.

ಪುರಸಭೆ ಮಾಜಿ ಸದಸ್ಯ ಬಿ.ಅಮೃತರಾಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ. ಅನಿಲ್, ಗೌಡ ವಿದ್ಯಾನಿಧಿ ಅಧ್ಯಕ್ಷ ಅಂಬೇಕಲ್ ನವೀನ್, ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ವಾಕಥಾನ್ ಹಾಗೂ ಸೈಕ್ಲಿಂಗ್ ಕಾರ್ಯಕ್ರಮದ ಸಂಚಾಲಕ ಎ.ಎಸ್.ಕುಮಾರ್, ಕುಶಾಲನಗರ ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ವಾಣಿ ಮಹೇಶ್, ಯುವತಿ ಮಂಡಳಿ ಅಧ್ಯಕ್ಷೆ ಅನುಷಾ ಅರ್ಜುನ್, ಯುವಕ ಮಂಡಳಿ ಅಧ್ಯಕ್ಷ ಕೆ.ಪ್ರವೀಣ್, ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಅಧ್ಯಕ್ಷ ಡಾ.ಪ್ರವೀಣ್ ದೇವರಕೊಂಡ, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ಕೆ.ಸತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿ ಚಿತ್ರಾ ರಮೇಶ್, ಲಯನ್ಸ್ ಅಧ್ಯಕ್ಷ ನಾರಾಯಣ್, ಇನ್ನರ್ ವ್ಹೀಲ್ ಅಧ್ಯಕ್ಷೆ ರೇಷ್ಮಾ ನವೀನ್, ಕಾವೇರಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್.ಚAದ್ರಮೋಹನ್, ಕೊಡಗು ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳಾದ ಪ್ರಸನ್ನ ಭಟ್, ದಾವುದ್ ಮೊದಲಾದವರಿದ್ದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ಹೊರಟ ಕಾಲ್ನಡಿಗೆ ಹಾಗೂ ಸೈಕ್ಲಿಂಗ್ ಜಾಥಾದಲ್ಲಿ ನೂರಾರು ಮಂದಿ ಭಾಗಿಯಾದರು. ಕುಶಾಲನಗರದ ಆರ್ಯವೈಶ್ಯ ಮಂಡಳಿಯ ವಿವಿಧ ಘಟಕಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ನಡಿಗೆಯಲ್ಲಿ ಪಟ್ಟಣದ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಪತ್ರಕರ್ತರು, ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದು ವಿಶೇಷವಾಗಿತ್ತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಿ ಅರಿವು ಮೂಡಿಸಲಾಯಿತು. -ಕೆ.ಎಸ್.ಮೂರ್ತಿ