ಸೋಮವಾರಪೇಟೆ, ಜ.೩: ಕೃಷಿ ಜಮೀನಿನಲ್ಲಿ ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದ ಸಂಗಯ್ಯನಪುರ ಗ್ರಾಮದ ಕೃಷಿಕ ಪೊನ್ನಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಡಾ. ಮಂತರ್ ಗೌಡ ಅವರು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಂಗಯ್ಯನಪುರ ಗ್ರಾಮದ ಕೃಷಿಕ ಪೊನ್ನಪ್ಪ ಅವರು ಕಳೆದ ತಾ. ೨೯ರಂದು ತಮ್ಮ ಮನೆ ಸಮೀಪದ ಕೃಷಿ ಭೂಮಿಯಲ್ಲಿ ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪಿದ್ದರು.

ಇಂದು ಪೊನ್ನಪ್ಪ ಅವರ ಮನೆಗೆ ತೆರಳಿದ ಶಾಸಕರು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರಲ್ಲದೆ, ಸರ್ಕಾರದ ವತಿಯಿಂದ ನೀಡಲಾಗುವ ರೂ. ೨೦ ಲಕ್ಷ ರೂಪಾಯಿ ಪರಿಹಾರ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್, ಆರ್‌ಎಫ್‌ಓ ಶೈಲೇಂದ್ರಕುಮಾರ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಸತೀಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.