ಮಡಿಕೇರಿ, ಜ. ೩: ಸಾರ್ವಜನಿಕ ಪ್ರದೇಶದÀಲ್ಲಿ ಬಂದೂಕು ಹಿಡಿದು ಓಡಾಡುತ್ತಿದ್ದ ಆರೋಪದಡಿ ಇಬ್ಬರು ಹಾಗೂ ಬಂದೂಕು ನೀಡಿದ್ದ ಒಬ್ಬನನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಮರಂದೋಡ ಗ್ರಾಮದ ಎ.ಆರ್. ಯೋಗೇಶ್ (೨೩), ಕಕ್ಕಬ್ಬೆಯ ಪಿ.ಎಂ. ಜಯ (೩೮), ಕೊಳಕೇರಿಯ ಎ.ಎಂ. ಸೋಮಣ್ಣ ಬಂಧಿತ ಆರೋಪಿಗಳು.

ತಾ. ೨ರ ರಾತ್ರಿ ಮೂರ್ನಾಡು ಜಂಕ್ಷನ್‌ನ ಬಾರ್‌ವೊಂದರ ಮುಂಭಾಗ ಆಟೋ ರಿಕ್ಷಾ ನಿಲ್ಲಿಸಿಕೊಂಡು, ಅದರಲ್ಲಿರುವ ವ್ಯಕ್ತಿಗಳು ಬಂದೂಕು ಹೊಂದಿದ್ದಾರೆ ಎಂದು ಗಸ್ತು ಕರ್ತವ್ಯಕ್ಕೆ ನೇಮಿಸಿದ್ದ ಹೋಂ ಗಾರ್ಡ್ ಸಿಬ್ಬಂದಿಯೊಬ್ಬರಿಗೆ ಸಾರ್ವಜನಿಕರಿಂದ ದೂರು ಬಂದಿದೆ. ತಕ್ಷಣ ಈ ವಿಷಯವನ್ನು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿದ ಸಂದರ್ಭ ಅಲ್ಲಿ ಯೋಗೇಶ್ ಹಾಗೂ ಪಿ.ಎಂ. ಜಯ ಅವರುಗಳಿದ್ದರು. ವಿಚಾರಣೆ ನಡೆಸಿದಾಗ ಬೇಟೆಯಾಡುವ ಸಲುವಾಗಿ ಕೋವಿಯನ್ನು ಪಡೆದುಕೊಂಡು ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕ ಪ್ರದೇಶದಲ್ಲಿ ಬಂದೂಕು ಹಿಡಿದು ಓಡಾಡಿದ ಯೋಗೇಶ್, ಜಯ ಹಾಗೂ ಬೇಟೆಗೆಂದು ಕೋವಿಯನ್ನು ನೀಡಿದ ಸೋಮಣ್ಣ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ ಕ್ರಮಕೈಗೊಂಡಿದ್ದಾರೆ.