ವೀರಾಜಪೇಟೆ, ಜ. ೩: ಸಮೀಪದ ಮಗ್ಗುಲ ಗ್ರಾಮದಲ್ಲಿ ಸಂಜೆಯ ಹೊತ್ತು ಗಜಪಡೆಗಳು ಧಾಳಿ ನಡೆಸಿ ತೋಟದ ಬೆಳೆಗಳನ್ನು ನಾಶಪಡಿಸಿ ಗ್ರಾಮಸ್ಥರು ಮತ್ತು ರೈತರು ಆತಂಕದಿAದ ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ.
ಹಿಂದೆ ಆಗೊಮ್ಮೆ, ಈಗೊಮ್ಮೆ ತಡರಾತ್ರಿಯಲ್ಲಿ ಬರುವ ಆನೆಗಳ ಹಿಂಡು ಬೆಳೆ ನಷ್ಟ ಮಾಡಿದ ಬಗ್ಗೆ ಮಗ್ಗುಲ ಗ್ರಾಮದಿಂದ ಸುದ್ದಿಗಳು ಬರುತ್ತಿದ್ದು ಈಗ ಒಂದು ವಾರದಿಂದ ಸಂಜೆಯಾಗುತ್ತಲೇ ಆನೆಗಳು ಗ್ರಾಮಕ್ಕೆ ನುಗ್ಗಿ ಕೊಯ್ಲು ಮಾಡಿದ ಭತ್ತ, ಹುಲ್ಲು, ಕಾಫಿ, ಬಾಳೆ ಮುಂತಾದ ಬೆಳೆಗಳನ್ನು ನಾಶಪಡಿಸಿವೆ. ಪ್ರಸ್ತುತ ಕಾಫಿ ಕುಯ್ಲಿನ ಸಮಯವಾಗಿದ್ದು ಕಣಗಳಲ್ಲಿ ರೈತರು ಕೆಲಸ ಮಾಡಲು ಆತಂಕ ಎದುರಾಗಿದೆ.
ನಿನ್ನೆ ಸಂಜೆ ಮೂರು ಆನೆಗಳನ್ನು ಒಳಗೊಂಡ ಆನೆಗಳ ಹಿಂಡು ಗ್ರಾಮದ ಪ್ರಗತಿಪರ ರೈತ ಪುಲಿಯಂಡ ಜಗದೀಶ್ ಹಾಗೂ ಅಕ್ಕಪಕ್ಕದ ರೈತರ ತೋಟಕ್ಕೆ ಲಗ್ಗೆ ಇಟ್ಟು ಗಿಡಗಳು ಮತ್ತು ಬೆಳೆಗಳನ್ನು ನಷ್ಟ ಪಡಿಸಿವೆ.
ರೈತರೊಬ್ಬರ ಕಣದಲ್ಲಿ ಚೀಲದಲ್ಲಿ ತುಂಬಿಸಿ ಇಟ್ಟಿದ್ದ ಭತ್ತವನ್ನು ಚೆಲ್ಲಾಪಿಲ್ಲಿಯಾಗಿಸಿದ ಘಟನೆ ನಡೆದಿದೆ.
ಅರಣ್ಯ ಅಧಿಕಾರಿಗಳಿಗೆ ಪ್ರತಿಬಾರಿ ವಿಷಯ ಮುಟ್ಟಿಸಿದರೂ ಯಾವುದೇ ರೀತಿಯ ಪರಿಹಾರ ಸಿಗದೇ ಇರುವುದರಿಂದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ನವರ ಬಳಿ ಗ್ರಾಮದಿಂದ ನಿಯೋಗ ತೆರಳಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.