ವೀರಾಜಪೇಟೆ, ಜ. ೫: ಕೊಡವ ಭಾಷೆಗೆ ಸಂಬAಧಿಸಿದ ವಿಚಾರಗಳು, ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ ಪರಂಪರೆ, ಸಾಧಕರು ಸೇರಿದಂತೆ ಇತರ ವಿಚಾರಗಳ ಸಮಗ್ರ ಚಿತ್ರಣ ಹಾಗೂ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿ ಕೊಡಿ. ಭಾಷೆ ಇದ್ದರೆ ಮಾತ್ರ ಜನಾಂಗ ಉಳಿಯಲು ಸಾಧ್ಯ ಎಂದು ವೀರಾಜಪೇಟೆ ಶಾಸಕ ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಪೊನ್ನಣ್ಣ ಹೇಳಿದರು.

ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯ ವತಿಯಿಂದ ವೀರಾಜಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಹಾಗು ರಾಜ್ಯ ಸರ್ಕಾರ ಸಂಪೂರ್ಣ ವರದಿಯನ್ನು ಕೇಳಿರುವುದನ್ನು ನಾವು ಸದ್ಭಳಕೆ ಮಾಡಿಕೊಳ್ಳಬೇಕು. ಭಾಷೆ ಇದ್ದರೆ ಮಾತ್ರ ಜನಾಂಗ ಉಳಿಯಲು ಸಾಧ್ಯ. ಭಾಷೆಗೆ ಸಂಬAಧಿಸಿದ ವಿಚಾರವನ್ನು ನಾವು ಸರ್ಕಾರಕ್ಕೆ ಮುಟ್ಟಿಸಬೇಕು. ಭಾರತ ಸಂವಿಧಾನದಲ್ಲಿ ೧೪ ಭಾಷೆಗಳು ಗುರುತಿಸಿಕೊಂಡರೂ ಕೇವಲ ಇಂಗ್ಲಿಷ್, ಹಿಂದಿ ಭಾಷೆಗಳು ಮಾತ್ರ ಬಳಕೆಯಾಗುತ್ತಿದೆ. ರಾಜ್ಯ ಸರ್ಕಾರದ ವರದಿ ಕೇಂದ್ರ ಸರ್ಕಾರಕ್ಕೆ ಹೋದ ಬಳಿಕ ಕೇಂದ್ರದ ಕ್ಯಾಬಿನೆಟ್‌ನಲ್ಲಿ ಚರ್ಚೆ ಆದ ನಂತರವೇ ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ಸೇರಿಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸುವಾಗ ಕೊಡವ ಭಾಷೆಯನ್ನು ಯಾವ ಕಾರಣಕ್ಕೆ ಸೇರಿಸಬೇಕು. ಭಾಷೆಯ ಮಾನದಂಡವೇನು ಎಂಬುದರ ಬಗ್ಗೆ ಸಂಪೂರ್ಣ ಚಿತ್ರಣ ಇರಬೇಕಾಗುತ್ತದೆ. ವರದಿ ತಯಾರು ಮಾಡಲು ಭಾಷಾ ತಜ್ಞರು, ಸಾಹಿತಿಗಳು, ಭಾಷಿಕ ಸಮುದಾಯದ ಮುಖಂಡರುಗಳ ಒಂದು ಸಮಿತಿ ರಚಿಸಿ ಸರ್ಕಾರ ಒಪ್ಪುವಂತಹ ಒಂದು ಸಮಗ್ರ ವರದಿಯನ್ನು ತಯಾರು ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡಿ. ರಾಜ್ಯದ ಮುಖ್ಯಮಂತ್ರಿಗಳಿಗೆ ಕೊಡವ ಭಾಷೆಯ ಬಗ್ಗೆ ವಿಶೇಷ ಕಾಳಜಿ ಇರುವುದರಿಂದ ಎಲ್ಲವೂ ಸಾಧ್ಯವಾಗುವ ಭರವಸೆ ಇದೆ. ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಎಷ್ಟಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅದನ್ನು ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ ಕೊಡವ ಭಾಷೆಯನ್ನು ೮ನೇ ಪರಿಚ್ಛೇದಕ್ಕೆ ವಿಚಾರದಲ್ಲಿ ಈ ಹಿಂದೆ ಲೋಕಸಭೆಯಲ್ಲಿ ೨ ಬಾರಿ ವರದಿ ಮಂಡನೆಯಾಗಿದೆ. ಈ ಬಾರಿ ಸರ್ಕಾರದಿಂದಲೇ ಸುತ್ತೋಲೆ ಬಂದಿರುವುದರಿAದ ಸಮಗ್ರ ವರದಿಯನ್ನು ನಾವು ಕಳುಹಿಸಿಕೊಡಬೇಕಾಗಿದೆ. ಕೊಡವ ಭಾಷೆ ಮಾತನಾಡುವವರ ಸಂಖ್ಯಾಬಲಕ್ಕಿAತ ಎಲ್ಲಾ ರೀತಿಯ ಅರ್ಹತೆ ಮತ್ತು ಮಾನದಂಡವನ್ನು ಹೊಂದಲಾಗಿರುವುದರಿAದ ನಮಗೆ ಜಯ ಸಿಗುತ್ತದೆ ಎಂದು ಹೇಳಿದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ ಕೊಡವ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸಿಗಬೇಕಾದರೆ ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವುದು ಅವಶ್ಯಕ. ನಮ್ಮ ಹಿಂದಿನ ರಾಜರುಗಳು ಕೊಡವರ ಲಿಪಿಯ ಶಿಲಾಶಾಸನವನ್ನು ಮಾಡಿದ್ದಿದ್ದರೆ ನಮಗೆ ಇಂದು ಇಷ್ಟು ಕಷ್ಟ ಆಗುತ್ತಿರಲಿಲ್ಲ. ಎಲ್ಲಾ ವಿದ್ಯಮಾನಗಳ ಜೊತೆಗೆ ಅಖಿಲ ಕೊಡವ ಸಮಾಜ ಇರುತ್ತದೆ ಎಂದು ಹೇಳಿದರು.

ಕೊಡವ ಭಾಷಿಕ ಜನಾಂಗದ ಅಧ್ಯಕ್ಷ ಪಡಿಙರಂಡ ಅಯ್ಯಪ್ಪ ಮಾತನಾಡಿ ಕೊಡವ ಭಾಷೆ ನಮ್ಮ ತಾಯಿ ಭಾಷೆಯಾಗಿದೆ. ೮ನೇ ಪರಿಚ್ಚೇದಕ್ಕೆ ಸೇರಲು ಎಲ್ಲಾ ಅರ್ಹತೆಯನ್ನು ಹೊಂದಲಾಗಿದೆ. ನಾವು ಸಹೋದರರಾಗಿ ನಿಮ್ಮೊಂದಿಗೆ ಇದ್ದೇವೆ. ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.

ಕೊಡವ ಭಾಷಿಕ ಜನಾಂಗದ ಒಕ್ಕೂಟದ ಅಧ್ಯಕ್ಷ ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ ಕಳೆದ ೩೦ ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ ಅವರು ಕೊಡವ ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂದು ಹೋರಾಟ ಮಾಡುತ್ತಾ ಬಂದಿದ್ದಾರೆ. ಕೊಡವ ಭಾಷಿಕ ಸಮುದಾಯ ನಿಮ್ಮೊಂದಿಗೆ ಇದೆ ಎಂದು ಹೇಳಿದರು.

೪೫೦೦ ವರ್ಷದ ಇತಿಹಾಸ

ಕೊಡವ ನ್ಯಾಷನಲ್ ಕೌನ್ಸಿಲ್ ಸಂಚಾಲಕ ನಂದಿನೆರವAಡ ನಾಚಪ್ಪ ಮಾತನಾಡಿ ಕೊಡವ ಭಾಷೆಗೆ ೪೫೦೦ ವರ್ಷಗಳ ಇತಿಹಾಸ ಇದೆ. ಭಾರತ ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಿಸಲು ಕೊಡವ ಭಾಷೆ ಎಲ್ಲಾ ಅರ್ಹತೆ ಹೊಂದಿದೆ. ಹರದಾಸ ಅಪ್ಪಚ್ಚ ಕವಿ, ಡಾ ಐ.ಮಾ ಮುತ್ತಣ್ಣ, ಬಾಚಮಾಡ ಗಣಪತಿ ಕೊರವಂಡ ಅಪ್ಪಯ್ಯ, ಬೊವ್ವೇರಿಯಂಡ ಉತ್ತಯ್ಯ, ಕಳೆದ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೊಡವ ವಾರಪತ್ರಿಕೆ ಬ್ರಹ್ಮಗಿರಿ ಹಾಗು ಪೂಮಾಲೆ ಪತ್ರಿಕೆಗಳು ಕೊಡವ ಭಾಷೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೊಡವ ಭಾಷೆಯಲ್ಲಿ ೮ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬುದನ್ನು ಕಳೆದ ಹಲವಾರು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದ್ದೇವೆ. ಹಲವಾರು ಹೋರಾಟಗಳನ್ನು ನಡೆಸಿದ್ದೇವೆ. ಈ ವಿಚಾರದಲ್ಲಿ ರಾಜ್ಯ ಹಾಗು ಕೇಂದ್ರ ಸರ್ಕಾರಗಳಿಗೆ ಹಲವಾರು ಮನವಿಗಳನ್ನು ಸಲ್ಲಿಸಿದ್ದೇವೆ. ತಿಂಗಳಲ್ಲಿ ೨ ಬಾರಿ ಸತ್ಯಾಗ್ರಹ ಮಾಡುವಾಗ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗುತ್ತಿದೆ. ಪ್ರತಿ ವರ್ಷ ಫೆಬ್ರವರಿ ೨೧ರಂದು ಅಂತರರಾಷ್ಟ್ರೀಯ ಭಾಷಾ ದಿನದಂದು ಯುನೇಸ್ಕೋದಲ್ಲಿ ವಿಷಯ ಮಂಡನೆ ಮಾಡಲಾಗುತ್ತಿದೆ. ಭಾಷೆ ಮಾತನಾಡುವುದಕ್ಕಿಂತ ಅದರ ಪ್ರಾಮುಖ್ಯತೆ ಹೆಚ್ಚಾಗಲು ಪ್ರತಿಯೊಬ್ಬರೂ ಕೊಡವ ಭಾಷೆಯಲ್ಲಿ ವ್ಯವಹರಿಸಿದರೆ ಭಾಷೆ ಬೆಳೆಯುತ್ತದೆ. ಭಾಷೆ ಎನ್ನುವುದು ತಾಯಿಗೆ ಸಮ .ನಾವು ಯಾವುದೇ ಭಾಷೆಯನ್ನು ಕಲಿತಿದ್ದರೂ ಕನಸು ಕಾಣುವುದು ನಮ್ಮ ಮಾತೃ ಭಾಷೆಯಲ್ಲಿಯೇ ಹೊರತು ಬೇರೆ ಭಾಷೆಯಲ್ಲಿ ಅಲ್ಲ. ಕೊಡವ ಭಾಷೆಯಲ್ಲಿ ೮ನೇ ಪರಿಚ್ಛೇದಕ್ಕೆ ಸೇರಿಸಿದರೆ ಕೊಡಗಿನಿಂದ ಲೋಕಸಭೆಗೆ ಆಯ್ಕೆ ಆದವರು ಕೊಡವ ಭಾಷೆಯಲ್ಲಿಯೇ ಮಾತನಾಡಬಹುದು. ಸಂಸತ್ ಭಾಷಾ ತರ್ಜುಮೆಗೆ ಅವಕಾಶ ಇದೆ. ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಹೇಳಿದರು.

ಕೊಡವ ಭಾಷಿಕರ ಸಾಕ್ಷಿ

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ ಕಳೆದ ಬಾರಿಯ ಕೊಡವಾಮೆ ಬಾಳೋ ಹೋರಾಟದ ಮುಂದುವರೆದ ಭಾಗ ಕೊಡವ ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸುವ ವಿಚಾರವಾಗಿದೆ. ಈ ವಿಚಾರದಲ್ಲಿ ೨೧ ಕೊಡವ ಭಾಷಿಕರು ಸಾಕ್ಷಿಯಾಗಿದ್ದಾರೆ. ಯಾವ ಕಾರಣಕ್ಕಾಗಿ ಕೊಡವ ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸಬೇಕು ಎಂಬುದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಸಭೆಗೆ ಮಂಡಿಸಿ ಕಳೆದ ೩೦ ವರ್ಷಗಳ ಹಿಂದೆ ಕೊಡವ ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸುವ ಬಗ್ಗೆ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ ಹೋರಾಟ ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಯುನೈಟೆಡ್ ಕೊಡವ ಆರ್ಗನೈಸೇಷನ್‌ನ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಹಾಗೂ ಬಬ್ಬೂಮಿ ಸಂಘಟನೆ ಪ್ರಮುಖರು ಕೈ ಜೋಡಿಸಿದರು ಎಂದರು.

ವರದಿ ಅಗತ್ಯ

೮ನೇ ಪರಿಚ್ಛೇದಕ್ಕೆ ಸೇರಿಸಲು ಯಾವ್ಯಾವ ಮಾನದಂಡವನ್ನು ಅನುಸರಿಸಬೇಕು ಎಂಬುದರ ಬಗ್ಗೆ , ಹಿಂದಿನ ಕೊಡವ ಭಾಷೆ, ಮಧ್ಯದಲ್ಲಿ ಬಂದ ಕೊಡವ ಭಾಷೆ, ಈಗಿನ ಕೊಡವ ಭಾಷೆ, ಕೊಡವ ಜಾನಪದ ಸಾಹಿತ್ಯ, ಕೊಡವ ಕವನ ಸಾಹಿತ್ಯ, ಕೊಡವ ಕಥಾ ಸಾಹಿತ್ಯ, ಕೊಡವ ಕಾದಂಬರಿ ಸಾಹಿತ್ಯ, ಕೊಡವ ನಾಟಕ ಸಾಹಿತ್ಯ, ಕೊಡವ ಬಾಳೋ ಪಾಟ್ ವಿಶೇಷತೆ, ಕೊಡವ ಭಾಷೆಯ ಉಳಿವಿಗಾಗಿ ಈವರೆಗೆ ಯಾವ್ಯಾವ ಸಂಘ ಸಂಸ್ಥೆಗಳು, ಕೊಡವ ಸಮಾಜಗಳು ಯಾವಾಗ ಪ್ರಾರಂಭವಾದವು. ಅವುಗಳ ಕಾರ್ಯವೈಖರಿ, ಕೊಡವ ಭಾಷಿಕ ಸಂಘ ಸಂಸ್ಥೆಗಳು ಹಾಗೂ ಅವುಗಳ ಕಾರ್ಯ ವೈಖರಿ, ಕೊಡವ ಭಾಷೆ ಮತ್ತು ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬAಧಪಟ್ಟ ಹಾಗೆ ದೇಶ ವಿದೇಶದಲ್ಲಿ ಇರುವ ಸಾಹಿತಿಗಳು ಸಂಶೋಧಕರುಗಳು, ಅಧ್ಯಯನಕಾರರ ಮಾಹಿತಿ, ಅವರು ಬರೆದಿರುವ ಪುಸ್ತಕಗಳು, ಕೊಡವ ಜನಾಂಗ, ಭಾಷಿಕ ಜನಾಂಗ, ಇವರಲ್ಲಿರುವ ಭಾಷೆ, ಸಂಸ್ಕೃತಿ, ನಾಡಿನ ವಿಚಾರದ ನಾಯಕರು, ರಾಷ್ಟ್ರ ನಾಯಕರುಗಳು, ಹೊರದೇಶದಲ್ಲಿ ಕೊಡವರ ಬಗ್ಗೆ ಪ್ರಶಂಸೆಯ ಮಾತುಗಳು, ಬಿರುದುಗಳು, ಮೆಚ್ಚುಗೆಯ ಮಾತುಗಳು, ಕೊಡವ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಯ ಬಗ್ಗೆ ಹೋರಾಡುತ್ತಿರುವ ಸಂಘ ಸಂಸ್ಥೆಗಳ ಮಾಹಿತಿ, ಅವರುಗಳ ಬೈಲಾಗಳು, ಕೊಡವ ಸಂಸ್ಕೃತಿಯಲ್ಲಿನ ಕೊಡವ ಆಟ್, ಪಾಟ್, ಕೊಡವ ಉಡುಪು, ಪೊಮ್ಮಕ್ಕಡ ಉಡುಪು, ಗಂಡಸರ ಉಡುಪು, ಧರಿಸುವ ಆಭರಣಗಳು, ಅದರ ಪೌರಾಣಿಕ ಹಿನ್ನೆಲೆ, ಇತಿಹಾಸ, ಕೊಡವರ ಜೀವನ ಶೈಲಿ, ಹಬ್ಬ ಹರಿದಿನ, ಮಂದ್ ಮಾನಿ, ಅಂಬಲ ಆರೋಡ, ಕೊಡವ ರಾಜರು, ದಿವಾನರು, ಪಾಳೆಯಗಾರರು, ಕೊಡವ ಸ್ವಾಮೀಜಿಗಳು, ಆಧ್ಯಾತ್ಮ ಗುರುಗಳು, ಕೊಡವ ಬಾಳೋಪಾಟ್ ಹಾಡುವವರು, ಕೊಡವ ಪದ್ಧತಿ ನಡೆಸುವವರು, ಕೊಡವ ಆಟ್‌ಕಾರ, ಕೊಡವ ಮತ್ತು ಕೊಡವ ಭಾಷಿಕರಲ್ಲಿ ದೇಶ ಸೇವೆ, ಸಂಸ್ಕೃತಿ, ಸಾಹಿತ್ಯ, ಕಲೆ, ಜಾನಪದ ಕ್ಷೇತ್ರ, ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರಿ ಗೌರವ, ನಾಗರಿಕ ಪ್ರಶಸ್ತಿ, ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿಗಳು, ಕೊಡವ ಜನಾಂಗದ ೨೧ ವೃತ್ತಿಯಾಧಾರಿತ ವರ್ಗೀಕರಣ, ಕೊಡವ ಭಾಷೆಯಲ್ಲಿ ಪಿಎಚ್‌ಡಿ ಪಡೆದವರು. ಐನ್‌ಮನೆ, ಬಲ್ಯಮನೆ, ಮಂದ್‌ಮನೆ ಇದರ ವಿಶೇಷತೆ, ಗದ್ದೆ, ಬಾಣೆ, ತೋಟ, ಊರಿನ ಹೆಸರು, ಬೆಟ್ಟ ಗುಡ್ಡ, ಹೊಳೆ ನದಿ, ಇವುಗಳ ಇತಿಹಾಸ, ಕೊಡವ ಪಡೆಯಾಳಿಗಳ ಪರಂಪರೆ, ರಾಜ್ಯ ಹಾಗು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರು, ಸರ್ಕಾರಿ ಹಾಗೂ ಉನ್ನತ ಸೇವೆಯಲ್ಲಿರುವವರು, ವೈದ್ಯಕೀಯ ಸೇವೆಯಲ್ಲಿ ಹೆಸರು ಮಾಡಿದವರು, ಕೊಡವ ಹಾಕಿ ಮತ್ತು ಸಂಸ್ಕೃತಿ, ಹಿಂದೆ ಆಡುತ್ತಿದ್ದ ಆಟಗಳು, ಕೊಡವ ಮದುವೆ ಪದ್ಧತಿ, ಸಾವು, ಮಗುವಿಗೆ ತೊಟ್ಟಿಲು ಹಾಕುವುದು, ಕೊಡವರ ಬದುಕಿನಲ್ಲಿರುವ ಮನೆಮದ್ದು, ಕೋವಿ ಕತ್ತಿ ಆಯುಧ ಅದರ ಬಳಕೆ ಇಂತಹ ಮಾಹಿತಿಗಳನ್ನು ಒಳಗೊಂಡಿರುತ್ತದೆ.

ಕೊಡವ ಭಾಷಿಕರು: ಅಮ್ಮಕೊಡವ, ಹೆಗ್ಗಡೆ, ಐರಿ, ಕೆಂಬಟ್ಟಿ, ಕೊಯವ, ಕೋಲೆಯ, ಕಣಿಯ, ಕಾಪಾಳ, ಕುಡಿಯ, ಅರಮನೆ ಪಾಲೆ, ಮಲಿಯಾ, ಮಾರಂಬಿ, ಮಡಿವಾಳ, ನಾಯಿಂದ, ಬಣ್ಣ, ಬಾನಿಯಾ, ಭೂಣೆಪಟ್ಟ, ಪಣಿಕ, ಆಡಿಯ, ಕೊಡವ ನಾಯರ್ ಮೊದಲಾದ ಅಂಶಗಳು ಅಡಕಗೊಳ್ಳಬೇಕಿದೆ.

ಸಭೆಯನ್ನು ಉದ್ದೇಶಿಸಿ ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಬಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ, ಸಾಹಿತಿ ತೀತಿರ ರೇಖಾ ವಸಂತ್ ಮಾತನಾಡಿದರು. ಇದೇ ಸಂದರ್ಭ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ವೀರಾಜಪೇಟೆ ಕೊಡವ ಸಮಾಜದ ಅಮ್ಮಣಿಚಂಡ ರವಿ ಉತ್ತಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕುಮಾರ್, ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಚಿನ್ನಸ್ವಾಮಿ ಉಪಸ್ಥಿತರಿದ್ದರು.

ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಪಂಡ ಗಣೇಶ್ ಸ್ವಾಗತಿಸಿದರು, ಮೊಣ್ಣಂಡ ಶೋಭಾ ಸುಬ್ಬಯ್ಯ ಪ್ರಾರ್ಥಿಸಿದರು, ವೀರಾಜಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.

- ವರದಿ : ಪಳೆಯಂಡ ಪಾರ್ಥ ಚಿಣ್ಣಪ್ಪ