ಕಣಿವೆ, ಜ. ೫: ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಹಂಗಾಮಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕುಶಾಲನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಕೋಟಿ ರಾಮಣ್ಣ ಅಧ್ಯಕ್ಷತೆಯಲ್ಲಿ ಕುಶಾಲನಗರದ ಟಾಪ್ ಇನ್ ಟೌನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಭವಿಷ್ಯದಲ್ಲಿ ಜಿಲ್ಲೆಯಲ್ಲಿ ನಡೆಯುವ ಪುರಸಭೆಗಳು, ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಪೊನ್ನಂಪೇಟೆ ತಾಲೂಕು ಕಾರ್ಮಾಡು ಸುಬ್ಬಣ್ಣ ಅವರನ್ನು ಆಯ್ಕೆ ಮಾಡಲಾಯಿತು.

ಪಕ್ಷದ ಮುಖಂಡ ಕೋತೂರು ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನಾಯಕರಿಲ್ಲದೇ ಪಕ್ಷದ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ಈಗ ಸುಬ್ಬಣ್ಣ ಅವರ ಆಯ್ಕೆಯಿಂದಾಗಿ ಪಕ್ಷಕ್ಕೆ ಬಲ ಬಂದಿದೆ ಎಂದರು.

ವಕೀಲ ಮನೋಜ್ ಬೋಪಯ್ಯ, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಮೂಲದಿಂದ ಬಲಪಡಿಸಲು ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಈ ಹಿಂದೆ ಇದ್ದ ಜೆಡಿಎಸ್ ಅನ್ನು ಮತ್ತೆ ಪ್ರಾಬಲ್ಯಕ್ಕೆ ತರಬೇಕಿದೆ ಎಂದರು. ಮುಂದಿನ ದಿನಗಳಲ್ಲಿ ಪಕ್ಷದ ಉಸ್ತುವಾರಿ ಮಾಜಿ ಸಚಿವ ಸಾರಾ ಮಹೇಶ್ ಅವರನ್ನು ಭೇಟಿ ಮಾಡಿ ಪಕ್ಷದ ಹೈಕಮಾಂಡ್ ನೀಡುವ ಸಲಹೆ ಹಾಗೂ ನಿರ್ದೇಶನಗಳನ್ನು ಪಾಲಿಸುವಂತೆ ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಪಕ್ಷದ ಪ್ರಮುಖರಾದ ಕೋತೂರು ಸುರೇಶ್, ಬೀಟಿಕಟ್ಟೆ ಹೆಚ್.ಡಿ. ಪ್ರವೀಣ್, ಸೋಮವಾರಪೇಟೆ ನಾಗರಾಜು, ವಕೀಲರಾದ ಕಾಟ್ನಮನೆ ವಿಠಲಗೌಡ, ಸುಂಟಿಕೊಪ್ಪದ ಎಂ.ಎA. ಷರೀಫ್, ಸಭೆಯ ಆಯೋಜಕ ಕುಶಾಲನಗರದ ಹೆಚ್.ಟಿ.ವಸಂತ, ಡಿ.ಪಿ.ಗಿರೀಶ್, ಸಂತೋಷ್, ವೆಂಕಟೇಶ್, ಕೆ.ಸಿ.ರಘು, ಶ್ರೀನಿವಾಸ್, ಕೂಡಿಗೆಯ ರಾಜು, ರಾಮಚಂದ್ರ ಮೊದಲಾದವರಿದ್ದರು.