ಮಡಿಕೇರಿ, ಜ. ೫: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ಅನ್ನು ಸರ್ಕಾರಿ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಗಣಿಸಿ, ಶಾಶ್ವತ ಅನುದಾನ ಮೀಸಲಿಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿರುವ, ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಪೊನ್ನಣ್ಣ ಅವರನ್ನು ಅವರ ಗೃಹಕಚೇರಿಯಲ್ಲಿ ಪರಿಷತ್ತಿನ ಕೇಂದ್ರ ಸಮಿತಿ ಹಾಗೂ ಕೊಡಗು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ನಂತರ ಪರಿಷತ್ತಿನ ಮನವಿ ಸ್ವೀಕರಿಸಿ ಸಭೆ ನಡೆಸಿದ ಪೊನ್ನಣ್ಣ ಅವರು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಮಕ್ಕಳ ಸಾಹಿತ್ಯ ಬೆಳವಣಿಗೆಗೆ ಶ್ರಮಿಸುತ್ತಿರುವುದನ್ನು ಸರ್ಕಾರ ಗಮನಿಸಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ವಿಶೇಷ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಸಹಕಾರ ನೀಡಲಿದ್ದಾರೆ ಎಂದರಲ್ಲದೆ, ಸಧ್ಯದಲ್ಲೇ ಪರಿಷತ್ತಿನ ನಿಯೋಗವನ್ನು ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿಸುವ ಭರವಸೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ಮಹಾದೇವ್, ಪ್ರಧಾನ ಕಾರ್ಯದರ್ಶಿ ಹು.ವಿ. ಸಿದ್ದೇಶ್, ಸಂಘಟನಾ ಕಾರ್ಯದರ್ಶಿ ಸಚಿನ್, ನಿರ್ದೇಶನ ಅಬ್ದುಲ್ ನಝೀರ್, ಕೊಡಗು ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಕಾರ್ಯದರ್ಶಿ ಕರಿನೆರವಂಡ ಡ್ಯಾನಿ ಕುಶಾಲಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಮುಕ್ಕಾಟಿರ ಕಾವೇರಮ್ಮ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಅಪ್ಪುಡ ಕುಶಾಲಪ್ಪ, ಜಿಲ್ಲಾ ನಿರ್ದೇಶಕರಾದ ಮಲ್ಲಂಡ ಶೃತಿಯ, ಮೀತಲತಂಡ ಇಸ್ಮಾಯಿಲ್, ವೀರಾಜಪೇಟೆ ಉಪಾಧ್ಯಕ್ಷ ಹರೀಶ್, ಪೊನ್ನಂಪೇಟೆ ತಾಲೂಕು ಕಾರ್ಯದರ್ಶಿ ನಳಿನಿ ಮತ್ತಿತರರು ಉಪಸ್ಥಿತರಿದ್ದರು.