ಸೋಮವಾರಪೇಟೆ,ಜ.೫: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳು ಅನುಭವಿಸುತ್ತಿರುವ ಸಮಸ್ಯೆಯನ್ನು ಖುದ್ದು ಆಲಿಸಿದ ಶಾಸಕ ಡಾ. ಮಂತರ್ ಗೌಡ ಅವರು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಅವರನ್ನು ದೂರವಾಣಿಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.

ಬೆಳಿಗ್ಗೆ ೧೦.೩೦ರ ಸುಮಾರಿಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಮಂತರ್ ಅವರು, ಅಷ್ಟರಲ್ಲಾಗಲೇ ೫೦ಕ್ಕೂ ಅಧಿಕ ರೋಗಿಗಳು ಮೂಳೆ ತಜ್ಞರ ಕೊಠಡಿ ಎದುರು ಜಮಾವಣೆಯಾಗಿದ್ದುದು, ಮೂಳೆ ತಜ್ಞರು ಆಸ್ಪತ್ರೆಗೆ ಆಗಮಿಸದೇ ಇದ್ದುದನ್ನು ಕಣ್ಣಾರೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಅವರಿಗೆ ದೂರವಾಣಿ ಕರೆ ಮಾಡಿದ ಶಾಸಕರು, ತೀವ್ರ ತರಾಟೆಗೆ ತೆಗೆದುಕೊಂಡರು. ಸ್ವತಃ ವೈದ್ಯರಾಗಿರುವ ಶಾಸಕ ಡಾ. ಮಂತರ್ ಅವರು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಅಲಭ್ಯತೆಯಿಂದಾಗಿ ರೋಗಿಗಳು ಪಡುತ್ತಿರುವ ಸಮಸ್ಯೆಗೆ ಸ್ಪಂದಿಸಿ, ಇಲಾಖೆಯ ಮೇಲಧಿಕಾರಿಗೆ ಕಟು ಮಾತುಗಳನ್ನಾಡಿದರು.

ಅವರದೇ ಮಾತಿನಲ್ಲಿ ತರಾಟೆ: ಸಾಧಾರಣವಾಗಿ ಎಲ್ಲರನ್ನೂ ‘ಅಣ್ಣಾ’ ಎಂದೇ ಸಂಬೋಧಿಸುವ ಮಂತರ್ ಅವರು, ಜಿಲ್ಲಾ ಆರೋಗ್ಯಾಧಿಕಾರಿಗಳನ್ನೂ ಸಹ ಅಣ್ಣಾ ಎಂದೇ ಕರೆಯುತ್ತಾ ತೀವ್ರವಾಗಿ ತರಾಟೆಗೆತ್ತಿಕೊಂಡರು. ನೂತನವಾಗಿ ನಿಯೋಜನೆಗೊಂಡಿರುವ ಮೂಳೆ ತಜ್ಞರು ಸಕಾಲಕ್ಕೆ ಆಸ್ಪತ್ರೆಗೆ ಬಾರದ ಕುರಿತಂತೆ ಶಾಸಕರು ಡಿಹೆಚ್‌ಓ ಅವರೊಂದಿಗೆ ಹೀಗೆ ಮಾತನಾಡಿದರು.

‘ಪೂವಯ್ಯನೋ ಯಾವಯ್ಯನೋ ನನಗೆ ಗೊತ್ತಿಲ್ಲ. ಈಗ ಗಂಟೆ ೧೦.೪೫ ಆದ್ರೂ ಡಾಕ್ಟರ್ ಇಲ್ಲ. ೫೦ ಪೇಶೆಂಟ್ ಹೊರಗಡೆ ಕಾಯ್ದಿದ್ದಾರೆ’ ಎಂದರು.

ಈ ಸಂದರ್ಭ ಸಮಜಾಯಿಷಿಕೆ ನೀಡಲು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮುಂದಾದರು. ಆಗ ‘ಸತೀಶಣ್ಣ ಒಂದ್ನಿಮಿಷ ಇರಿ, ನಾನೂ ಬೇಕಾದಷ್ಟು ನೋಡಿದ್ದೀನಿ. ನನಗೂ ಸಾಕಾಯ್ತಾ ಇದೆ. ಡಾಕ್ಟರ್‌ನ ಡಿಸಿಪ್ಲೀನ್ ಮಾಡೋಕೆ ನಿಮಗೆ ಆಗದಿದ್ರೆ, ನಾವ್ ಯಾರ ಮೇಲೆ ಡಿಸಿಪ್ಲೀನ್ ತಗೊಳ್ಳೋದು, ಸಂಬಳ ಕಟ್ಕೊಂಡು ಏನ್ ಆಗಬೇಕು ಅವ್ರಿಗೆ.., ಕಿತ್ತ್ ಬಿಸಾಕಿ; ಬೇರೆಯವ್ರಿಗಾದ್ರೂ ವೇಕೆನ್ಸಿ ತರ‍್ಸಿ. ಇವ್ರು ಇಲ್ಲಿಗೂ ಬರೊಲ್ಲಾ.., ಬೇರೆಯವ್ರೂ ಬರೋಹಾಗಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಮುಂದುವರೆದ ಶಾಸಕರು, ‘ಹೊಸಬರನ್ನಾದ್ರೂ ತಗೊಳ್ಳಿ, ಸಸ್ಪೆಂಡ್ ಮಾಡೋಕೆ ನಿಮಗೆ ತಾಕತ್ತಿಲ್ಲ ಬಿಡಿ’ ಎಂದರು. ಅತ್ತಲಿಂದ ನೋಟೀಸ್ ನೀಡುವ ವಿಚಾರ ಪ್ರಸ್ತಾಪಗೊಂಡ ಸಂದರ್ಭ ಮತ್ತೆ ಗರಂ ಆದ ಶಾಸಕರು, ‘ನೋಟೀಸ್ ಕಟ್ಕೊಂಡು ಏನ್ರೀ? ಪೇಶೆಂಟ್ ಇಲ್ಲಿ ಕಾಯ್ತಾ ಇಲ್ವಾ? ಆರ್ಥೋಪೆಡಿಕ್ಟ್ಗೆ ಬರೋರೆಲ್ಲಾ ಕಷ್ಟದಲ್ಲಿರೋರೇ? ಅವ್ರು ಬರೋದಿಲ್ಲಾ ಅಂತಾದ್ರೆ.., ಬರೋದಿಲ್ಲ ಅಂತನಾಡ್ರೋ ಇಲ್ಲಿ ಬೋರ್ಡ್ ಹಾಕಿ. ಹೀಗೆ ನಿರ್ಲಕ್ಷö್ಯ ಮಾಡಿದ್ರೆ ಆಗಲ್ಲ; ಅವ್ರಿಗೆ ಆಗಲ್ಲಾಂದ್ರೆ ಮನೆಗೆ ಕಳುಹಿಸಿ, ಬೇರೆಯವ್ರು ರ‍್ತಾರೆ ರೀ..,’ ಎಂದರು.

‘ನೀವು ವೇಕೆನ್ಸಿನೂ ತರ‍್ಸಲ್ಲ ಅಂದ್ರೆ ಅರ್ಥ ಏನು? ಅವ್ರಿಗೆ ಇದೂ ಬೇಕು-ಅದೂ ಬೇಕು. ಕುಶಾಲನಗರದಲ್ಲಿ ಅನಸ್ತೇಷಿಯಾನೂ ಹೀಗೇ ಆಗುತ್ತಿದೆ. ಪಾಪದ ಪೇಶೆಂಟ್ ಕಾಯ್ತಾ ಇದ್ದಾರೆ ಇಲ್ಲಿ’ ಎಂದು ಸಮಸ್ಯೆಯನ್ನು ವಿವರಿಸಿದರು.

ಡಿಹೆಚ್‌ಓ ಅವರು, ಮೂಳೆ ತಜ್ಞರು ವೀರಾಜಪೇಟೆಯಿಂದ ಬರಬೇಕು ಸರ್ ಎಂದಾಗ-‘ಅವ್ರು ಆ ಪೇಟೆ ಈ ಪೇಟೆಯಿಂದ ಬರಬೇಕು ಅಂದ್ರೆ ಹೇಗೆ? ಕೆಲಸದಿಂದ ರಿಝೈನ್ ಮಾಡ್ಲಿ, ತೊಂದರೆ ಇಲ್ಲ. ಬೇರೆ ಜನರಲ್ ಡಾಕ್ಟರ್ ನೋಡ್ತಾರೆ. ಸ್ಪೆಷಾಲಿಟಿ ಡಾಕ್ಟರ್ ಇದ್ರೆ ಜನ ಕಾಯ್ತಾರೆ ಅಂತ ಗೊತ್ತಾಗೋದಿಲ್ವೇನ್ರೀ ಅವ್ರಿಗೆ. ಚೇಂಜ್ ಆಗಿಲ್ಲಾಂದ್ರೆ ಕಿತ್ ಬಿಸಾಕ್ರಿ ಅಷ್ಟೇ.. ಬೇರೆಯವ್ರು ರ‍್ತಾರೆ. ನೀವು ಜವಾಬ್ದಾರಿ ತಗೊಳ್ರಿ ಡಿಪಾರ್ಟೆಂಟ್ ಹೆಡ್ ಅಲ್ವಾ? ನನಗೆ ಗೊತ್ತಿಲ್ಲ.., ಇವತ್ತೇ ಸಮಸ್ಯೆ ಕ್ಲಿಯರ್ ಆಗಬೇಕು’ ಎಂದು ಖಡಕ್ ಆಗಿ ಹೇಳಿದರು. ಶಾಸಕರ ಖಡಕ್ ಮಾತುಗಳಿಗೆ ಆಸ್ಪತ್ರೆಯಲ್ಲಿದ್ದ ಇತರ ವೈದ್ಯರು, ಸಿಬ್ಬಂದಿಗಳು, ಸಾರ್ವಜನಿಕ ರೋಗಿಗಳು ಗಪ್‌ಚುಪ್ ಆಗಿದ್ದರು.

- ವಿಜಯ್