ಸಿದ್ದಾಪುರ, ಜ. ೫: ಬಾಡಗ ಬಾಣಂಗಾಲ ಗ್ರಾಮದಲ್ಲಿ ಹುಲಿ ದಾಳಿಯಿಂದಾಗಿ ಗಬ್ಬದ ಹಸು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಹಾಡಹಗಲೇ ಬಾಡಗ ಬಾಣಂಗಾಲ ಗ್ರಾಮದ ಮಠದ ನಿವಾಸಿ ಎಂ. ಅಚ್ಚಯ್ಯ ಎಂಬವರು ತಮ್ಮ ಗಬ್ಬದ ಹಸುವನ್ನು ಅವರ ಮನೆಯ ಬಳಿ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದರು. ಅಪರಾಹ್ನ ಬಳಿಕ ಹುಲಿ ಹಸುವಿನ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಪರಿಣಾಮ ಹಸು ಸಾವನ್ನಪ್ಪಿದೆ. ಸ್ಥಳಕ್ಕೆ ತಿತಿಮತಿ ವಲಯ ಎ.ಸಿ.ಎಫ್. ಗೋಪಾಲ್ ಹಾಗೂ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿ ಮತ್ತು ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಉಪವಲಯ ಅರಣ್ಯ ಅಧಿಕಾರಿ ಶಶಿ ತಂಡದ ಸಿಬ್ಬಂದಿಗಳು ಹುಲಿಯ ಚಲನವಲನ ಕಂಡುಹಿಡಿಯಲು ಕಾರ್ಯಾಚರಣೆ ನಡೆಸಿದರು. ರಾತ್ರಿಯೂ ಕೂಡ ಗಸ್ತು ತಿರುಗಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಕಳೆದ ಒಂದು ತಿಂಗಳ ಒಳಗೆ ಐದಕ್ಕೂ ಅಧಿಕ ಗಬ್ಬದ ಹಸುಗಳು ಬಾಡಗ ಬಾಣಂಗಾಲ ಗ್ರಾಮದಲ್ಲಿ ಹುಲಿ ದಾಳಿಗೆ ಬಲಿಯಾಗಿರುತ್ತದೆ.