ನಾಪೋಕ್ಲು, ಜ. ೬: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೬ನೇ ನೂತನ ಶಾಖೆ ಕಕ್ಕಬ್ಬೆಯಲ್ಲಿ ಲೋಕಾರ್ಪಣೆಗೊಂಡಿದ್ದು ಕಕ್ಕಬೆ ವ್ಯಾಪ್ತಿಯ ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು.

ಕಕ್ಕಬ್ಬೆಯಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೬ನೇ ನೂತನ ಶಾಖೆಯ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಬಳಿಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಫೆಬ್ರವರಿ ೨೫ ರ ಮಹಾಶಿವರಾತ್ರಿಯ ಶುಭದಿನದಂದು ಬ್ಯಾಂಕಿನ ಕುಶಾಲನಗರ ಶಾಖೆಯ ನೂತನ ಸ್ವಂತ ಕಟ್ಟಡವನ್ನು ಉದ್ಘಾಟಿಸಲಾಗುವುದು. ಮುಂದಿನ ೬ ತಿಂಗಳ ಒಳಗೆ ೨೭ ನೇ ಶಾಖೆಯನ್ನು ಕುಶಾಲನಗರ ತಾಲೂಕಿನ ಗುಡ್ಡೆಹೊಸೂರುವಿನಲ್ಲಿ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪೊನ್ನಂಪೇಟೆ ತಾಲೂಕಿನ ಕಾನೂರು, ಕುಶಾಲನಗರ ತಾಲೂಕಿನ ಕೂಡುಮಂಗಳೂರು, ಚೆಟ್ಟಳ್ಳಿ, ಹಾಗೂ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಶಾಖೆಗಳನ್ನು ತೆರೆಯಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡು ಅನುಮತಿಗಾಗಿ ಆರ್‌ಬಿಐಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

೨೦೨೫-೨೬ನೇ ಸಾಲಿನಿಂದ ಸಹಕಾರ ಸಂಘಗಳ ಮೂಲಕ ವಿತರಿಸುತ್ತಿರುವ ಶೂನ್ಯ ಬಡ್ಡಿದರದ ಸಾಲವನ್ನು ನಬಾರ್ಡ್ ಸೂಚಿಸಿರುವ ಇ ಕೆಸಿಸಿ ಪೋರ್ಟಲ್ ಮುಖಾಂತರವೇ ವಿತರಿಸಲು ಸೂಚನೆ ನೀಡಿದ್ದು. ಇದರಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾತ್ರವೇನೂ ಇರುವುದಿಲ್ಲ. ಈ ಪೋರ್ಟಲ್ ಮುಖಾಂತರ ಸಾಲ ವಿತರಣೆ ಸಂದರ್ಭ ಸಂಪೂರ್ಣ ಅನ್ ಲೈನ್ ಮುಖಾಂತರವೇ ಸಾಲ ಮಂಜೂರಾತಿಯಾಗುವ ವೇಳೆ ಸಾಲ ವಿತರಣೆ ಕಾರ್ಯ ವಿಳಂಬವಾಗುವ ಸಾಧ್ಯತೆ ಇರುವುದಾಗಿ ತಿಳಿಸಿದರು.

ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ಎ. ತಮ್ಮಯ್ಯ ಮಾತನಾಡಿ ಕಕ್ಕಬ್ಬೆಯಲ್ಲಿ ಬ್ಯಾಂಕಿನ ಶಾಖೆ ತೆರೆದಿರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ನಬಾರ್ಡ್ನ ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಮುಂಡAಡ ಸಿ. ನಾಣಯ್ಯ ಮಾತನಾಡಿ ಕೊಡಗಿನಂತಹ ಚಿಕ್ಕ ಜಿಲ್ಲೆಯಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಅದ್ಬುತ ಸಾಧನೆ ಮಾಡಿದ್ದು, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಮತ್ತು ಕೊಡಗಿನ ಗ್ರಾಹಕರೇ ಇದಕ್ಕೆ ಕಾರಣ ಎಂದರು.

ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿಯಲ್ಲಿ ಮೊದಲ ಸಹಕಾರ ಸಂಘವನ್ನು ಕೆ.ಪಿ. ದೊಡ್ಡಯ್ಯ ಅವರು ಸ್ಥಾಪಿಸಿದ್ದು, ಇದರ ಸವಿ ನೆನಪಿಗಾಗಿ, ಅವರ ಭಾವಚಿತ್ರವನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.

ನೂತನ ಶಾಖೆಯ ಭದ್ರತಾ ಕೊಠಡಿಯನ್ನು ಉಪಾಧ್ಯಕ್ಷ ಕೆ. ಎಸ್. ಹರೀಶ್ ಪೂವಯ್ಯ ಉದ್ಘಾಟಿಸಿದರು. ನಗದು ಕೌಂಟರಿನ ಉದ್ಘಾಟನೆಯನ್ನು ಕಲ್ಯಾಟಂಡ ಮುತ್ತಪ್ಪ ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ಯು ರಾಬಿನ್ ದೇವಯ್ಯ ಮಾತನಾಡಿದರು. ಈ ಸಂದರ್ಭ ವಿವಿಧ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಸಂಸ್ಥೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನಗಿನ ಮತ್ತು ಗಾಯನ ಪ್ರಾರ್ಥಿಸಿ, ಬ್ಯಾಂಕಿನ ಉಪಾಧ್ಯಕ್ಷ ಕೆ. ಎಸ್. ಹರೀಶ್ ಪೂವಯ್ಯ ಸ್ವಾಗತಿಸಿದರು. ಬ್ಯಾಂಕಿನ ನಿರ್ದೇಶಕ ಹೊಸೂರು ಜೆ. ಸತೀಶ್ ಕುಮಾರ್ ವಂದಿಸಿದರು.