ಕಣಿವೆ, ಜ. ೬: ಕುಶಾಲನಗರ ಪುರಸಭಾ ವ್ಯಾಪ್ತಿಯ ಮಾರುಕಟ್ಟೆ ರಸ್ತೆಯಲ್ಲಿನ ತ್ಯಾಗರಾಜ ಬಡಾವಣೆಯಲ್ಲಿ ಸಮರ್ಪಕವಾದ ವಾಸದ ಮನೆಗಳು ಇಲ್ಲದೇ ಎರಡು ದಶಕಗಳಿಂದ ಪರಿತಪಿಸುತ್ತಿದ್ದ ೨೧ ಕುಟುಂಬಗಳ ನಿವಾಸಿಗಳಿಗೆ ಸರ್ಕಾರದ ಹಕ್ಕುಪತ್ರದ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ.

ಪುರಸಭೆ ವ್ಯಾಪ್ತಿಯ ಸರ್ವೆ ನಂಬರ್ ೧೬೫/೩ ರ ಜಾಗದಲ್ಲಿ ಈ ಹಿಂದೆ ಪಟ್ಟಣ ಪಂಚಾಯಿತಿ ಇದ್ದ ಅವಧಿಯಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಪಟ್ಟಿ ಮಾಡಿದ್ದ ಫಲಾನುಭವಿಗಳ ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಶ್ರಮಿಕರು ಹಾಗೂ ಕೂಲಿ ಕಾರ್ಮಿಕ ಕುಟುಂಬಗಳ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಶಾಸಕ ಡಾ.ಮಂತರ್‌ಗೌಡ, ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಕಂದಾಯ ಅಧಿಕಾರಿ ಸಂತೋಷ್ ಕುಮಾರ್ ಅವರನ್ನು ಬರಮಾಡಿಕೊಂಡು ಹಕ್ಕು ಪತ್ರಗಳಿಲ್ಲದೇ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ಇಲ್ಲಿನ ೨೧ ಕುಟುಂಬಗಳಿಗೆ ಮುಂದಿನ ಒಂದು ವಾರದೊಳಗಾಗಿ ಹಕ್ಕು ಪತ್ರ ಸಿದ್ದಗೊಳಿಸಲು ಗಡುವು ನೀಡಿದರು.

ಕಳೆದ ೨೫ ವರ್ಷಗಳಿಂದ ಮನೆಗಳನ್ನು ಪಡೆಯದೇ ಏನು ಮಾಡುತ್ತಿದ್ದೀರಿ ? ಯಾಕಾಗಿ ನಿಮ್ಮಂತಹ ಕಡುಬಡವರಿಗೆ ನಿರ್ಗತಿಕರಿಗೆ ಸೂರು ನೀಡಲು ಹಿಂದಿನವರಿಗೆ ಆಗಲಿಲ್ಲ ಎಂದು ಪ್ರಶ್ನಿಸಿದ ಮಂತರ್ ನಮ್ಮದು ಬಡವರ ಪರ ಇರುವ ಪಕ್ಷ. ಬಡವರೆ, ದೀನ ದಲಿತರಿಗೆ, ಶೋಷಿತರ ಪರವಾಗಿ ಸರ್ಕಾರ ಇದೆ. ಇಲ್ಲಿ ಇರುವ ನೈಜ ಫಲಾನುಭವಿಗಳ ಪಟ್ಟಿ ಕಂದಾಯ ಇಲಾಖೆಯಲ್ಲಿದೆ. ಕೂಡಲೇ ಅವರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಪರಿಸರವನ್ನು ಸ್ವಚ್ಛಂದವಾಗಿ ಇಡುವ ಮೂಲಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಶಾಸಕರು ಸಲಹೆಯಿತ್ತರು. ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಇದ್ದರು.