ಕೂಡಿಗೆ, ಜ. ೭: ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದ ಕುವೆಂಪು ಅವರು ರೂಪಿಸಿದ ‘ವಿಶ್ವಮಾನವ ಸಂದೇಶ‘ ಸಾರ್ವಕಾಲಿಕ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯಿಸಿದರು.
ಕೊಡಗು ವಿಶ್ವವಿದ್ಯಾಲಯದ ಜ್ಞಾನಕಾವೇರಿ ಆವರಣದ ಹಾರಂಗಿ ಸಭಾಂಗಣದಲ್ಲಿ ಕನ್ನಡಸಿರಿ ಸ್ನೇಹ ಬಳಗ ಹಾಗೂ ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ, ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವಮಾನವ ಕುವೆಂಪುರವರ ಜನ್ಮೋತ್ಸವ ಮತ್ತು ಸಮಗ್ರ ಸಾಹಿತ್ಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಜನಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಉದ್ದೇಶದಿಂದ ಹುಟ್ಟಿಕೊಂಡ ವಿಶ್ವಮಾನವ ಸಂದೇಶದ ಪರಿಕಲ್ಪನೆಯು ಜಾತಿ ಮತ ಧರ್ಮಗಳನ್ನು ಮೀರಿದ್ದಾಗಿದೆ. ಈ ವಿಚಾರಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಂ.ಕೆ. ದಿನೇಶ್ ಅವರು ಮಾತನಾಡಿ, ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮAತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಮತ್ತು ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ಬಿ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕುಶಾಲನಗರದ ರೋಟರಿ ಪೂರ್ವಾಧ್ಯಕ್ಷ ಎಂ. ಡಿ. ರಂಗಸ್ವಾಮಿ, ಕುಶಾಲನಗರ ಪುರಸಭೆ ಮಾಜಿ ಸದಸ್ಯ ಪ್ರಕಾಶ್, ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖರಾದ. ಕೆ.ಕೆ.ನಾಗರಾಜಶೆಟ್ಟಿ, ನಿವೃತ್ತ ಶಿಕ್ಷಕರಾದ ಉ.ರಾ. ನಾಗೇಶ್, ಖಾನ್ ಮಾಸ್ಟರ್, ಹೆಬ್ಬಾಲೆ ನಿವೃತ್ತ ಶಿಕ್ಷಕ ಹೆಚ್.ಎಸ್. ಲೋಕೇಶ್, ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಜಮೀರ್ ಅಹಮದ್ ಸೇರಿದಂತೆ ವಿವಿಧ ವಿಭಾಗಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ವಿಭಾಗ ಉಪನ್ಯಾಸಕ ಡಾ. ಜಮೀರ್ ಅಹಮದ್ ನಿರೂಪಿಸಿ, ವಂದಿಸಿದರು.
ಗೋಷ್ಠಿ-ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ “ರಾಷ್ಟ್ರಕವಿ ಕುವೆಂಪುರವರ ಸಮಗ್ರ ಸಾಹಿತ್ಯ” ಕುರಿತು ಕಣಿವೆಯ ಖ್ಯಾತ ಸಾಹಿತಿಗಳಾದ ಭಾರದ್ವಾಜ ಕೆ. ಆನಂದತೀರ್ಥ ಅವರು ಉಪನ್ಯಾಸ ನೀಡಿದರು.
ವಿಶ್ವಮಾನವ ಕುವೆಂಪುರವರ ಜನ್ಮೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯನ್ನು ಕುಶಾಲನಗರದ ನಿವೃತ್ತ ಶಿಕ್ಷಕರಾದ ಉ.ರಾ. ನಾಗೇಶ್ ಅವರು ನೆರವೇರಿಸಿದರು.