ಮಡಿಕೇರಿ, ಜ. ೭: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ತಾ. ೯ ರಿಂದ ೧೧ ರ ತನಕ ನಡೆಯಲಿದೆ ಎಂದು ಅಧ್ಯಕ್ಷ ಎಂ.ಸಿ. ಅರುಣ್ ಕುಮಾರ್ ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿಯ ಜ. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ತಾ. ೯ ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಉದ್ಘಾಟನೆ ಮಾಡಲಿದ್ದಾರೆ. ಕ್ರೀಡಾಕೂಟಕ್ಕೆ ಈಗಾಗಲೇ ೫೨೪ ಕ್ರೀಡಾಪಟುಗಳು ಹೆಸರು ನೋಂದಾಯಿಸಿಕೊAಡಿದ್ದು, ಮತ್ತಷ್ಟು ನೌಕರರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ಕ್ರೀಡಾಕೂಟದಂದು ನೋಂದಾವಣಿಗೆ ಅವಕಾಶವಿದೆ ಎಂದರು. ತಾ. ೯ ರಂದು ಅಥ್ಲೆಟಿಕ್ಸ್, ತಾ. ೧೦ ರಂದು ಸಾಂಸ್ಕೃತಿಕ ಸ್ಪರ್ಧೆಗಳು, ತಾ. ೧೧ ರಂದು ಶಟಲ್ ಬ್ಯಾಡ್ಮಿಂಟನ್, ಚೆಸ್, ಕೇರಂ, ಟೇಬಲ್ ಟೆನ್ನಿಸ್ ಕ್ರೀಡಾಕೂಟಗಳು ನಡೆಯಲಿವೆ. ರಾಜ್ಯ ಸರಕಾರದ ಖಾಯಂ ನೌಕರರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಯಾವುದೇ ಇಲಾಖೆಯಲ್ಲಿ ಕ್ರೀಡಾ ಕೋಟದಡಿ ನೇಮಕವಾದ ನೌಕರರಿಗೆ ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ. ಸಂಗೀತ, ನೃತ್ಯ, ಕಲಾ ಶಿಕ್ಷಕರು, ಸಂಗೀತ, ನೃತ್ಯ, ಕರಕುಶಲ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ನೌಕರರಿಗೆ ಮೂರು ಆಟಗಳಲ್ಲಿ ಮಾತ್ರ ಭಾಗವಹಿಸುವ ಅವಕಾಶವಿರುತ್ತದೆ. ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯ ಸೌಲಭ್ಯವಿರುತ್ತದೆ ಎಂದು ವಿವರಿಸಿದರು. ಹೆಚ್ಚಿನ ಮಾಹಿತಿಗೆ ೯೪೮೦೯೧೭೭೦೭ ಅಥವಾ ೯೪೮೨೪೫೧೪೮೮ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದರು. ಗೋಷ್ಠಿಯಲ್ಲಿ ಖಜಾಂಚಿ ಪಿ.ಡಿ. ರಾಜೇಶ್, ಕಾರ್ಯದರ್ಶಿ ಬಿ.ಜಿ. ಸಂದೀಪ, ರಾಜ್ಯ ಸಮಿತಿ ಸದಸ್ಯ ಪಿ.ಎಂ. ಬಾಬು ಹಾಜರಿದ್ದರು.