ಸಿದ್ದಾಪುರ, ಜ. ೯: ಬಾಡಗ- ಬಾಣಂಗಾಲ ಗ್ರಾಮದಲ್ಲಿ ಮುಂದುವರಿದ ಹುಲಿಯು ಹಸುಗಳನ್ನು ಕೊಂದಿರುವ ಹಿನ್ನೆಲೆ ಬಾಡಗ -ಬಾಣಂಗಾಲ ಗ್ರಾಮದ ಮಠದ ಕಾಫಿ ತೋಟದಲ್ಲಿ ಹುಲಿ ಸೆರೆಗೆ ಬೋನ್ ಇರಿಸಲಾಗಿದೆ. ಅಲ್ಲದೆ ಹುಲಿಯ ಚಲನವಲನ ಕಂಡುಹಿಡಿಯುವ ನಿಟ್ಟಿನಲ್ಲಿ ಐದು ಕ್ಯಾಮರಗಳನ್ನು ಮರಗಳಲ್ಲಿ ಅಳವಡಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಒಂದು ತಿಂಗಳಿನಿAದ ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯ ಮಠದಲ್ಲಿ ಹುಲಿ, ಹಸುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದೆ. ಈ ಹಿನ್ನೆಲೆಯಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ತಂಡದ ಸಿಬ್ಬಂದಿಗಳು ಹುಲಿಯ ಚಲನವಲನ ಕಂಡುಹಿಡಿಯಲು ಕಾರ್ಯಾಚರಣೆಯನ್ನು ನಡೆಸಿದರು. ಅಲ್ಲದೆ ಹುಲಿ ಹಸುಗಳನ್ನು ಅಟ್ಟಾಡಿಸಿಕೊಂಡು ಹೋಗಿರುವ ಹಾಗೂ ಕೊಂದಿರುವ ಸ್ಥಳಗಳಲ್ಲಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಹುಲಿಯನ್ನು ಸೆರೆ ಹಿಡಿಯಲು ಗ್ರಾಮಸ್ಥರು ಒತ್ತಾಯ ಮಾಡಿದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಫಿ ತೋಟದೊಳಗೆ ಬೋನ್ ಇರಿಸಿದ್ದಾರೆ.
ಬೋನಿನ ಒಳಗೆ ಖಾಸಗಿ ಸಂಸ್ಥೆಗಳ ಕಾಫಿ ತೋಟಗಳಲ್ಲಿ ಬೀಡಾಡಿ ದನಗಳು ಇದ್ದು ಇವುಗಳ ಮೇಲೆ ಕೂಡ ಹುಲಿ ದಾಳಿ ನಡೆಸಿ ಕೊಂದು ಹಾಕುತ್ತಿರುವ ಮಾಹಿತಿಗಳು ಕೂಡ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಭಿಸಿದೆ. ಆದರೆ ಕಾಡಿನೊಳಗೆ ಇರಬೇಕಾದ ವ್ಯಾಘ್ರ ಇದೀಗ ಆಹಾರ ಅರಸಿಕೊಂಡು ಬೇಟೆ ಮಾಡಿ ನಾಡಿನತ್ತ ಲಗ್ಗೆ ಇಟ್ಟಿದೆ. ಹುಲಿಯನ್ನು ಸೆರೆಹಿಡಿಯುವ ವಿಶ್ವಾಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
-ವಾಸು