ಮಡಿಕೇರಿ, ಜ. ೧೧:ಶನಿವಾರದಂದು ಸಹಜ ರೀತಿಯಲ್ಲಿದ್ದ ವಾತಾವರಣದಲ್ಲಿ ದಿಢೀರ್ ಬದಲಾವಣೆ ಕಂಡು ಬಂದಿದೆ. ಜಿಲ್ಲೆಯಾದ್ಯಂತ ಮೋಡ ಆವರಿಸುವುದರೊಂದಿಗೆ ಮತ್ತೆ ಚಳಿಯ ಅನುಭವವೂ ಹೆಚ್ಚಾಗಿದೆ. ಜೊತೆಗೆ ಭಾನುವಾರ ಬೆಳಗ್ಗಿನ ವೇಳೆಯಲ್ಲಿ ಜಿಲ್ಲೆಯ ಅಲ್ಲಲ್ಲಿ ತುಂತುರು ಮಳೆಯಾಗುವುದರೊಂದಿಗೆ ಕಾಫಿ ಕೆಲಸದ ನಡುವೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.
ತಿತಿಮತಿ ವಿಭಾಗ, ಬಿರುನಾಣಿ, ಐಗೂರು, ಸುತ್ತಮುತ್ತಲ ಪ್ರದೇಶ, ಜಿಲ್ಲಾ ಕೇಂದ್ರ ಮಡಿಕೇರಿಯ ಹೊರವಲಯ ಹಾಗೂ ಸಿದ್ದಾಪುರ ಸುತ್ತಮುತ್ತ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಭುವನಗಿರಿ ಸೇರಿದಂತೆ ಹಲವೆಡೆಗಳಲ್ಲಿ ಒಂದಷ್ಟು ಮಳೆಯ ಸಿಂಚನವಾಗಿದೆ. ದಿನವಿಡೀ ಸೂರ್ಯನ ದರ್ಶನವಿಲ್ಲದೆ ಮೋಡ ಕವಿದ ವಾತಾವರಣವೇ ಮುಂದುವರೆದಿತ್ತು. ಅನಿರೀಕ್ಷಿತವಾಗಿ ಮಳೆಯ ಸಿಂಚನವಾದ ಹಿನ್ನೆಲೆಯಲ್ಲಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಪ್ಲಾಸ್ಟಿಕ್ ಟಾರ್ಪಲುಗಳಿಂದ ಮುಚ್ಚಲು ಬೆಳೆಗಾರರು ಪರದಾಡುವಂತಾಗಿತ್ತು.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಸ್ಥಿತಿಯಿಂದಾಗಿ ಜಿಲ್ಲೆಯಲ್ಲಿ ಈ ಸನ್ನಿವೇಶ ಎದುರಾಗಿದ್ದು, ತಾ. ೧೪ ರ ತನಕವೂ ಇದು ಮುಂದುವರೆಯುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.