ಮಡಿಕೇರಿ, ಜ. ೧೧: ಇಲ್ಲಿನ ಕಾವೇರಿ ಹಾಲ್ ಸಭಾಂಗಣದಲ್ಲಿ ಉಮ್ಮತ್ ಒನ್ ಕೊಡಗು ಹಾಗೂ ಶಾಹಿನ್ ಶಿಕ್ಷಾ ಯಾತ್ರೆ ವತಿಯಿಂದ ನಡೆದ ವಿದ್ಯಾರ್ಥಿಗಳಿಗಾಗಿ ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಕೊಡಗು ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳ ೪೦೦ಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪನ್ಯಾಸಕರು, ಶಿಕ್ಷಕರು ಭಾಗವಹಿಸಿದ್ದರು.
ಶಿಕ್ಷಣ ಕ್ಷೇತ್ರದ ವಿವಿಧ ತಜ್ಞರು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿದರು. ದೆಹಲಿಯ ವ್ಯಕ್ತಿತ್ವ ವಿಕಸನ ತರಬೇತುದಾರ ಅತೀಖು ರೆಹಮಾನ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಇಂತಹದೇ ವೃತ್ತಿಯನ್ನು ಆಯ್ಕೆ ಮಾಡಬೇಕು ಎಂಬ ಧೋರಣೆಯನ್ನು ಕೈಬಿಡಬೇಕು. ಅವರ ಮೇಲೆ ಒತ್ತಡ ಹೇರಬಾರದು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿವೆ. ಆದ್ದರಿಂದ ಅವರ ಮುಂದಿನ ಭವಿಷ್ಯವನ್ನು ಆಯ್ಕೆ ಮಾಡಲು ಅವರಿಗೆ ಸ್ವಾತಂತ್ರ‍್ಯ ನೀಡಬೇಕಾಗಿದೆ. ಇಂದು ಹೆಚ್ಚಾಗಿ ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ವೈದ್ಯಕೀಯ ಮತ್ತು ಇಂಜಿನಿಯರಿAಗ್ ಕೋರ್ಸ್ಗಳನ್ನು ಆಯ್ದುಕೊಳ್ಳುವಂತೆ ಪ್ರೋತ್ಸಾಹಿಸುತ್ತಿರುವುದು ಕಂಡುಬರುತ್ತಿದೆ. ಇದು ಅವರಲ್ಲಿರುವ ಅಭಿರುಚಿಗಳಿಗೆ ವಿರುದ್ಧವಾಗುತ್ತದೆ. ಮಾತ್ರವಲ್ಲ, ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯೂ ಅಧಿಕ ಎಂದು ಅವರು ಹೇಳಿದರು.
ಇಂದು ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ತಮ್ಮ ಸಹಪಾಟಿಗಳು ಯಾವುದನ್ನು ಆಯ್ಕೆ ಮಾಡುತ್ತಾರೆ ಅದನ್ನು ನಾನು ಮಾಡುತ್ತೇನೆ ಎಂಬ ಮನೋಭಾವ ಹೊಂದಿದ್ದಾರೆ. ಇಂತಹ ಧೋರಣೆಯನ್ನು ಕೈ ಬಿಡಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಅಭಿರುಚಿಗಳಿಗೆ ತಕ್ಕಂತೆ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.
ಸಲಹಾ ಸಮಿತಿ ಸದಸ್ಯ ಹಾರೂನ್ ಕಾರ್ಯಾಗಾರ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಖಾಲಿದ್, ಉಮ್ಮತ್ ಒನ್ ಕೊಡಗು ಅಧ್ಯಕ್ಷ ಎಂ.ಬಿ. ಬಶೀರ್, ಭಟ್ಕಲ್ ಮಸೀದಿ ಖತೀಬರು ಅಲೀ ಮುಸ್ಲಿಯಾರ್, ಕೋಶಾಧಿಕಾರಿ ಸಿ.ಎಂ. ಹಮೀದ್ ಫೈಝಿ, ಶಾಹಿನ್ ಸಂಸ್ಥೆ ನಿರ್ದೇಶಕ ಶಕನೂರು ಸಾಂಬರ್ಕರ್ ಪುಣೆ, ಶಾಹಿನ್ ಅಕಾಡೆಮಿ ಘಟಕದ ಮುಖ್ಯಸ್ಥ ಫೈಝೂನ್ ದಾವೀಸ್ ಹಾಗೂ ಉಮ್ಮತ್ ಒನ್ ಸಂಘಟನೆಯ ಟ್ರಸ್ಟಿ ಸಲೀಂ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.