ಕೂಡಿಗೆ, ಜ. ೧೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದ ಸಮೀಪದ ಹಾಸನ ಹೆದ್ದಾರಿ, ಮೈಸೂರು-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ, ಕುಶಾಲನಗರದಿಂದ ಮಡಿಕೇರಿ ಕಡೆಗೆ ಮತ್ತು ವೀರಾಜಪೇಟೆ ಕಡೆಗೆ ಅಲ್ಲದೇ ಹಾರಂಗಿ ಕಡೆಗೆ ಹೋಗುವ ಎಲ್ಲಾ ವಾಹನಗಳ ಮೇಲೆ ನಿಗಾ ಇಡಲು ಗುಡ್ಡೆಹೊಸೂರು ಕೇಂದ್ರದ ಸರ್ಕಲ್‌ನ ಹೆದ್ದಾರಿ ರಸ್ತೆಯಲ್ಲಿ ನೂತನ ತಂತ್ರಜ್ಞಾನದ ಎ.ಎನ್.ಪಿ.ಆರ್. ಕ್ಯಾಮರಾ ಅಳವಡಿಸಲಾಗಿದೆ.

ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲಿಸುವುದು, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು, ಓವರ್ ಸ್ಪೀಡ್, ತ್ರಿಬಲ್ ರೈಡಿಂಗ್ ಇತ್ಯಾದಿ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಡಿವಾಣ ಹಾಕಲು ಸಿ.ಸಿ. ಕ್ಯಾಮರಾ ಹಾಕಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎ.ಎನ್.ಪಿ.ಆರ್. ಕ್ಯಾಮರಾವು ಚಾಲನೆಗೊಂಡಿದ್ದು, ಕಾರ್ಯ ನಿರ್ವಹಿಸುತ್ತಿದೆ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ರಾಮಚಂದ್ರ ತಿಳಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕ್ಯಾಮರಾ ನಿಗಾ ಇಡಲಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು, ಕ್ಯಾಮರಾದಲ್ಲಿ ಸೆರೆ ಆದಲ್ಲಿ ಅಟೋಮ್ಯಾಟಿಕ್ ಆಗಿ ಅದಕ್ಕೆ ಸಂಬAಧಿಸಿದ ದಂಡ ವಾಹನದ ಮಾಲೀಕರಿಗೆ ರವಾನೆ ಆಗುತ್ತದೆ. ಹೀಗಾಗಿ ಕಡ್ಡಾಯವಾಗಿ ವಾಹನ ಸವಾರರು ಸಂಚಾರಿ ನಿಯಮವನ್ನು ಪಾಲಿಸುವಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ. ನೂತನ ತಂತ್ರಜ್ಞಾನದ ಕ್ಯಾಮರಾ ಅಳವಡಿಸಿರುವ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ರಾಮಚಂದ್ರ ಅವರು ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.