ಮಡಿಕೇರಿ, ಜ. ೧೧: ಕೂರ್ಗ್ ಪಬ್ಲಿಕ್ ಸ್ಕೂಲ್ ಮತ್ತು ಪ್ರೀ ಯೂನಿವರ್ಸಿಟಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವು ಇತ್ತೀಚಿಗೆ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಪ್ರೊ. ಅಶೋಕ್ ಸಂಗಪ್ಪ ಅಲೂರ ಅವರು, ಪದವಿ ಪ್ರದಾನ ದಿನವು ಕೇವಲ ಶೈಕ್ಷಣಿಕ ಮೈಲಿಗಲ್ಲಷ್ಟೇ ಅಲ್ಲ, ಯುವ ಮನಸ್ಸುಗಳ ಜೀವನಯಾತ್ರೆಯ ಮಹತ್ವದ ತಿರುವು ಎಂದು ಹೇಳಿದರು. ಇದು ಸಾಧನೆ ಮತ್ತು ಕೃತಜ್ಞತೆಯ ದಿನವಾಗಿದ್ದು, ನಿದ್ರೆಯಿಲ್ಲದ ರಾತ್ರಿ ಹಾಗೂ ಮೌನವಾದ ಸಹನಶೀಲತೆಯ ಪ್ರತೀಕವಾಗಿದೆ ಎಂದು ವಿವರಿಸಿದರು.

ಪದವಿ ಪಡೆಯುವುದು ಪರೀಕ್ಷೆಯ ಯಶಸ್ಸಿಗಿಂತಲೂ ಆತ್ಮಾವಿಷ್ಕಾರದ ಸಂಕೇತವೆAದು ಅವರು ಒತ್ತಿ ಹೇಳಿದರು. ಶಿಕ್ಷಕರ ಸಹನೆ ಮತ್ತು ಮಾರ್ಗದರ್ಶನ, ಪೋಷಕರ ತ್ಯಾಗಗಳು ಪ್ರತಿಯೊಬ್ಬ ಪದವೀಧರರ ಯಶಸ್ಸಿನ ಹಿಂದಿರುವ ಮೌನ ಶಕ್ತಿಗಳೆಂದು ಅವರು ಗುರುತಿಸಿದರು. ೨೧ನೇ ಶತಮಾನದ ಶಿಕ್ಷಣವು ಕೃತಕ ಬುದ್ಧಿಮತ್ತೆ (ಎಐ), ಜೈವಿಕ ತಂತ್ರಜ್ಞಾನ ಮೊದಲಾದ ಹೊಸ ಕ್ಷೇತ್ರಗಳಿಂದ ರೂಪುಗೊಳ್ಳುವ ಜೀವಮಾನಪೂರ್ಣ ಪ್ರಯಾಣ ವಾಗಿದ್ದು, ಅದಕ್ಕೆ ಕರುಣೆ ಅತ್ಯಂತ ಬಲವಾದ ಅಡಿಪಾಯವೆಂದು ತಿಳಿಸಿದರು.

ಶಾಲಾ ಪ್ರಾಂಶುಪಾಲರಾದ ಡಾ. ಎಂ. ರಾಮಚಂದ್ರನ್ ಅವರು ಪದವಿ ಪ್ರತಿಜ್ಞೆಯನ್ನು ಬೋಧಿಸಿ, ವಿದ್ಯಾರ್ಥಿಗಳು ಜವಾಬ್ದಾರಿ ಮತ್ತು ನೈತಿಕತೆಯೊಂದಿಗೆ ವಿಶಾಲ ಜಗತ್ತಿಗೆ ಕಾಲಿಡುವಂತೆ ಪ್ರೇರೇಪಿಸಿದರು. ಶಿಕ್ಷಕರ ಶ್ರೇಷ್ಠತಾ ಪ್ರಶಸ್ತಿಯನ್ನು ತ್ರಿಷಾ ಅಯ್ಯಪ್ಪ ಕೆ, ಶೃಂಗಾ ಟಿ.ಸಿ. ಹಾಗೂ ಮಾ. ದಿವಿಷ್ ಡಿ. ಅವರಿಗೆ ಪ್ರದಾನಿಸಲಾಯಿತು.

ಪ್ರಾಂಶುಪಾಲರ ಶ್ರೇಷ್ಠತಾ ಪ್ರಶಸ್ತಿಯನ್ನು ಸನಾ ಪೂಣಚ್ಚ ಹಾಗೂ ಮಾ. ಅಭಿನವ್ ಬಿ. ನಾಯರ್ ಅವರಿಗೆ ನೀಡಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಶಾಲಾ ಟ್ರಸ್ಟ್ನ ಅಧ್ಯಕ್ಷ ಕೆ. ಧನ್ಯ ಸುಬ್ಬಯ್ಯ ಅವರು ಅಧ್ಯಕ್ಷೀಯ ಭಾಷಣ ಮಾಡಿ, ತಮ್ಮ ಕನಸುಗಳ ಸೌಂದರ್ಯದಲ್ಲಿ ನಂಬಿಕೆ ಇಡುವವರಿಗೇ ಭವಿಷ್ಯ ಸೇರಿದೆ ಎಂಬ ಮಾತನ್ನು ಉಲ್ಲೇಖಿಸಿ, ಪದವೀಧರರಿಗೆ ಕನಸುಗಳಿಗೆ ಮಿತಿಯಿಲ್ಲವೆಂದು ನೆನಪಿಸಿದರು.