ಕೊಡ್ಲಿಪೇಟೆ, ಜ. ೧೧: ಜಾನಪದ ಹಿನ್ನೆಲೆ ಹೊಂದಿರುವ ಕೊಡ್ಲಿಪೇಟೆ ಸಮೀಪದ ಬೆಂಬಳೂರು ಗ್ರಾಮದ ಶ್ರೀ ಬಾಣಂತಮ್ಮ ದೇವಿ ಮತ್ತು ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭಗೊAಡಿವೆ. ತಾ. ೧೬ ರಂದು ಬೆಳಗ್ಗೆ ೮ ಗಂಟೆಯಿAದ ಸಂಜೆ ೫.೩೦ ರವರೆಗೆ ನಡೆಯಲಿರುವ ಜಾತ್ರೋತ್ಸವಕ್ಕೆ ಬೆಂಬಳೂರು ಗ್ರಾಮದ ಶ್ರೀ ಕಲ್ಲೇಶ್ವರ ಸೇವಾ ಟ್ರಸ್ಟ್ ನೇತೃತ್ವ ವಹಿಸಿದೆ.

ಬೆಂಬಳೂರು ಜಾತ್ರೆ ಎಂದೇ ಹೆಸರುವಾಸಿಯಾಗಿರುವ ಶ್ರೀ ಬಾಣಂತಮ್ಮ ಹಾಗೂ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಾರೆ. ಪುರಾಣೇತಿಹಾಸ ಹೊಂದಿರುವ, ಈ ಭಾಗದಲ್ಲಿ ನಡೆಯುವ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಯೂ ಬೆಂಬಳೂರು ಜಾತ್ರೆಗಿದೆ.

ಬೆಂಬಳೂರು ಗ್ರಾಮಕ್ಕೆ ನೂರಾರು ವರ್ಷಗಳ ಹಿನ್ನೆಲೆಯಿದ್ದು, ಬೆಂಬಳೂರನ್ನು ಪಾಳೆಗಾರರು ಆಳ್ವಿಕೆ ಮಾಡಿರುವ ಬಗ್ಗೆ ಉಲ್ಲೇಖವಿದೆ. ಕೊಡಗಿನ ಕೊನೆಯ ರಾಜ ಚಿಕ್ಕವೀರರಾಜೇಂದ್ರ ಅವರ ಆಳ್ವಿಕೆ ಕಾಲದಲ್ಲಿ ಬೆಂಬಳೂರು ಗ್ರಾಮವನ್ನು ಪಾಳೆಗಾರರು ಆಳ್ವಿಕೆ ಮಾಡಲು ಬಿಟ್ಟುಕೊಟ್ಟಿರುವ ಬಗ್ಗೆಯೂ ಇತಿಹಾಸ ಹೇಳುತ್ತದೆ. ನಾನೂರು ವರ್ಷಗಳ ಹಿಂದಿನಿAದಲೂ ಗ್ರಾಮದ ಕುಲದೇವತೆ ತಾಯಿ ಬಾಣಂತಮ್ಮ ದೇವಿ ಮತ್ತು ಆಕೆಯ ಕೊನೆಯ ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆಯನ್ನು ಸಂಕ್ರಾAತಿ ಹಬ್ಬದ ಮರುದಿನ ನಡೆಸಿಕೊಂಡು ಬರಲಾಗುತ್ತಿದೆ. ಶ್ರದ್ಧಾಭಕ್ತಿಯ ಆಚರಣೆಯೊಂದಿಗೆ ಸಂಭ್ರಮಕ್ಕೆ ಜಾತ್ರೋತ್ಸವ ವೇದಿಕೆಯಾಗಿದೆ.

ದೈವಿಕ ಹಿನ್ನೆಲೆಯ ಉತ್ಸವ: ಬೆಂಬಳೂರು ಬಾಣಂತಮ್ಮಳಿಗೆ ಒಟ್ಟು ೭ ಮಂದಿ ಪುತ್ರರಿದ್ದು, ಇದರಲ್ಲಿ ೬ ಮಂದಿ ಬೇರೆ ಬೇರೆ ಊರಿಗೆ ವಲಸೆ ಹೋಗುತ್ತಾರೆ. ಬಾಣಂತಮ್ಮಳ ಕೊನೆಯ ಪುತ್ರ ಕುಮಾರಲಿಂಗೇಶ್ವರನು ತನ್ನ ಬಳಿಯಲ್ಲಿಯೇ ಇರಬೇಕೆಂಬ ಉದ್ದೇಶದಿಂದ ಪುತ್ರನ ಕಾಲು ಮುರಿದು ತನ್ನಲ್ಲಿ ಇರಿಸಿಕೊಳ್ಳುತ್ತಾಳೆ. ಈ ಹಿನ್ನೆಲೆ ಶ್ರೀ ಕುಮಾರಲಿಂಗೇಶ್ವನಿಗೆ ಕುಂಟ ಕುಮಾರಲಿಂಗೇಶ್ವರ ಸ್ವಾಮಿ ಎಂದು ಕರೆಯಲಾಗುತ್ತದೆ ಎಂಬ ಪ್ರತೀತಿ ಈ ಭಾಗದಲ್ಲಿದೆ.

ಸಂಕ್ರಾAತಿ ಹಬ್ಬದ ಮರು ದಿನ ಬೆಳಗ್ಗೆ ೭ ಗಂಟೆಯಿAದ ಮಧ್ಯಾಹ್ನ ೧೨ ಗಂಟೆಯವರೆಗೆ ತಾಯಿ ಬಾಣಂತಮ್ಮಳ ಜಾತ್ರೆಯನ್ನು ಬಾಣಂತಮ್ಮ ಜಾತ್ರಾ ಮೈದಾನದಲ್ಲಿ ಹಾಗೂ ಮಧ್ಯಾಹ್ನ ೧ ಗಂಟೆಯಿAದ ಸಂಜೆ ೫ ರವರೆಗೆ ಕುಮಾರಲಿಂಗೇಶ್ವರ ಜಾತ್ರಾ ಮೈದಾನದಲ್ಲಿ ಪುತ್ರ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಬೆಂಬಳೂರಿನಲ್ಲಿ ಬಾಣಂತಮ್ಮಳ ಹೆಸರಿನಲ್ಲಿ ಕೆರೆ ಇದ್ದು, ಜಾತ್ರೆ ದಿನ ಮಹಿಳೆಯರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುತ್ತಾರೆ. ಜಾತ್ರೋತ್ಸವ ದಿನದಂದು ತಾಯಿ ಶ್ರೀ ಬಾಣಂತಮ್ಮ ಮತ್ತು ಪುತ್ರ ಶ್ರೀ ಕುಮಾರಲಿಂಗೇಶ್ವರ ದೇವರ ಮೂರ್ತಿಯನ್ನು ಸಾಂಪ್ರದಾಯಿಕ ವಾದ್ಯಗೋಷ್ಠಿಯೊಂದಿಗೆ ಜಾತ್ರಾ ಮೈದಾನಕ್ಕೆ ಅಡ್ಡ ಪಲ್ಲಕ್ಕಿಯೊಂದಿಗೆ ಮೆರವಣಿಗೆ ತಂದು ವಿಶೇಷ ಶ್ರದ್ಧೆಯಿಂದ ಪೂಜಿಸಲಾಗುತ್ತದೆ.

ಜಾತ್ರೆಯಲ್ಲಿ ಬೆಂಬಳೂರು ಮಾತ್ರವಲ್ಲದೇ ಸುತ್ತಮುತ್ತಲಿನ ಅನೇಕ ಗ್ರಾಮಗಳು, ಶನಿವಾರಸಂತೆ, ಕೊಡ್ಲಿಪೇಟೆ, ಪಕ್ಕದ ಹಾಸನ ಜಿಲ್ಲೆಯ ಸಕಲೇಶಪುರ, ಯಸಳೂರು ಭಾಗದಿಂದಲೂ ಭಕ್ತರು ಪಾಲ್ಗೊಳ್ಳುತ್ತಾರೆ. ಜಾತ್ರೋತ್ಸದ ಹಿನ್ನೆಲೆ ಪುರುಷರಿಗೆ ವಾಲಿಬಾಲ್ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ನಡೆಯಲಿದೆ. ಜಾತ್ರೋತ್ಸವಕ್ಕೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಕಲ್ಲೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ರೂಪೇಶ್ ತಿಳಿಸಿದ್ದಾರೆ.