ಶನಿವಾರಸಂತೆ, ಜ. ೧೧ ಶನಿವಾರಸಂತೆ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದ ಜಾಗದಲ್ಲಿ ರೂ.೧.೭೦ ಕೋಟಿ ವೆಚ್ಚದಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೆ ಸಜ್ಜಾಗಿದೆ. ಈ ಮೂಲಕ ಪಟ್ಟಣದ ಸಾರ್ವಜನಿಕರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಬಹುದಿನಗಳ ಕನಸು ನನಸಾಗಿದ್ದು, ನನೆಗುದಿಗೆ ಬಿದ್ದಿದ್ದ ಬಸ್ ನಿಲ್ದಾಣ ನಿರ್ಮಾಣದ ಯೋಜನೆ ಪೂರ್ಣಗೊಂಡಿದೆ.
ಅರ್ಧಶತಮಾನದಿAದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದ ಶನಿವಾರಸಂತೆ ಪಟ್ಟಣಕ್ಕೊಂದು ಬಸ್ ನಿಲ್ದಾಣ ಬೇಕು ಎಂಬ ಬೇಡಿಕೆ ಇಂದು ಶಾಸಕ ಡಾ.ಮಂತರ್ ಗೌಡ ಅವರ ಪರಿಶ್ರಮದಿಂದ ಈಡೇರಿದೆ.
ಕೊಡಗಿನ ಗಡಿಭಾಗ ಶನಿವಾರಸಂತೆ ಹಾಸನ, ಸಕಲೇಶಪುರ, ಮೈಸೂರು, ಬೆಂಗಳೂರು, ಮಂಗಳೂರಿಗೆ, ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಪಟ್ಟಣವಾಗಿದೆ.ಅನೇಕ ವರ್ಷಗಳಿಂದಲೂ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವೇ ತಾತ್ಕಾಲಿಕ ಬಸ್ ನಿಲ್ದಾಣವಾಗಿದ್ದು; ಪ್ರತಿದಿನ ೪೦ ಕ್ಕೂ ಅಧಿಕ ಸರ್ಕಾರಿ ಬಸ್‌ಗಳು ಹಾಗೂ ೪೫ಕ್ಕೂ ಅಧಿಕ ಖಾಸಗಿ ಬಸ್‌ಗಳು ಶನಿವಾರಸಂತೆಗೆ ಬಂದು ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಪ್ರದಕ್ಷಿಣೆ ಹಾಕಿಯೇ ತೆರಳುತ್ತವೆ. ವ್ಯವಸ್ಥಿತ ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರಿಗೆ, ಉದ್ಯೋಗಸ್ಥರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿತ್ತು.ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಶನಿವಾರಸಂತೆಯೊಲ್ಲೊAದು ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಿತ್ತು ಆದರೆ ಸ್ಥಳಾವಕಾಶದ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ನಂತರ ಸ್ಥಳೀಯ ಪ್ರವಾಸಿ ಮಂದಿರದ ಪಕ್ಕದ ಖಾಲಿ ಜಾಗವನ್ನು ಗುರುತಿಸಿ ಗ್ರಾಮ ಪಂಚಾಯಿತಿ ಬಸ್ ನಿಲ್ದಾಣ ನಿರ್ಮಾಣಕ್ಕೆ ತೀರ್ಮಾನ ಕೈಗೊಂಡಿತು. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಸತೀಶ್ ಅವರ ಗಮನಕ್ಕೆ ತಂದಾಗ ಸ್ಪಂದಿಸಿದ್ದ ಅವರು ಸ್ಥಳ ಪರಿಶೀಲನೆ ಮಾಡಿದ್ದರು. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕ್ರಿಯಾತ್ಮಕವಾಗಿ ಕೆಲಸ ಆರಂಭಿಸಿ ಜಾಗ ವಶಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಿ ಬಸ್ ನಿಲ್ದಾಣ ನಿರ್ಮಾಣ ವಿಚಾರವಾಗಿ ಕಾಂಗ್ರೆಸ್ ಮುಖಂಡ ಹಾಗೂ ಹೈಕೋರ್ಟ್ ವಕೀಲ ಚಂದ್ರಮೌಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ವಿಧಾನ ಸಭಾ ಚುನಾವಣಾ ಸಂದರ್ಭ ಪ್ರಚಾರಕ್ಕೆ ಆಗಮಿಸಿದ್ದ ಶಾಸಕ ಡಾ.ಮಂತರ್ ಗೌಡ ಅವರಲ್ಲಿ ಸ್ಥಳೀಯ ಸಾರ್ವಜನಿಕರು ಬಸ್ ನಿಲ್ದಾಣದ ಬೇಡಿಕೆ ಮುಂದಿಟ್ಟಿದ್ದರು. ಶಾಸಕರಾದ ನಂತರ ಮಂತರ್ ಗೌಡ ಮುತುವರ್ಜಿ ವಹಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿ, ಸಮಾಲೋಚಿಸಿ ಒಪ್ಪಿಗೆ ಪಡೆದು ಅನುದಾನ ಬಿಡುಗಡೆ ಮಾಡಿಸಿದರು. ವರ್ಷದ ಹಿಂದೆ ಅವರನ್ನು ಕರೆಸಿ ಭೂಮಿಪೂಜೆ ನೆರವೇರಿಸಿದ್ದರು,ಇದೀಗ ಗ್ರಾಮ ಪಂಚಾಯಿತಿಯ ಕನಸು ನನಸಾಗಿ ಬಸ್ ನಿಲ್ದಾಣದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಉದ್ಘಾಟನೆಗೆ ದಿನ ನಿಗದಿಗೊಳಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.
ಬಸ್ ನಿಲ್ದಾಣದ ಕಾಮಗಾರಿ ಸಂಪೂರ್ಣಗೊಳ್ಳಲು ಇನ್ನೂ ಒಂದೂವರೆ ಕೋಟಿ ಅನುದಾನದ ಅವಶ್ಯಕತೆ ಇದೆ.ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ.ಸಾರ್ವಜನಿಕರ ಕೆಲಸ ಮಾಡುವುದು ಶಾಸಕನಾಗಿ ತನ್ನ ಜವಾಬ್ದಾರಿ ಎಂದು ತಿಳಿಸಿರುವ ಶಾಸಕರು, ಗ್ರಾಮ ಪಂಚಾಯಿತಿಗೆ ಮುಂದಿನ ದಿನಗಳಲ್ಲಿ ೨೫ ಸೆಂಟ್ ಜಾಗವನ್ನು ನೀಡುವುದಾಗಿ ತಿಳಿಸಿದ್ದಾರೆ.ಅದರಲ್ಲಿ ಗ್ರಾಮ ಪಂಚಾಯಿತಿ ವಾಣಿಜ್ಯ ಮಳಿಗೆ ನಿರ್ಮಿಸುವ ಯೋಜನೆ ಮಾಡಲಿದ್ದು;ಪಟ್ಟಣ ಮತ್ತಷ್ಟು ಅಭಿವೃದ್ಧಿ ಹೊಂದಲು ಈ ಯೋಜನೆ ಪೂರಕವಾಗಲಿದೆ ಎಂಬ ಅಭಿಪ್ರಾಯ ಪಂಚಾಯಿತಿ ಆಡಳಿತ ಮಂಡಳಿಯದ್ದಾಗಿದೆ.