ಮಡಿಕೇರಿ, ಜ.೧೧ : ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ದಿನಗಳು ಜೀವನದಲ್ಲಿಯೇ ಸ್ಮರಣೀಯ ದಿನಗಳಾಗಿರುತ್ತವೆ. ಕೊಡಗಿನ ಜನತೆ ನೀಡಿದ ಪ್ರೀತಿ, ವಿಶ್ವಾಸ ಎಂದಿಗೂ ಮರೆಯಲಾರೆ; ಉತ್ತರ ಭಾರತೀಯನಾದ ತನಗೆ ಕೊಡಗು ಎರಡನೇ ಮನೆಯಿದ್ದಂತೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅನಿಸಿಕೆ ವ್ಯಕ್ತಪಡಿಸಿದರು.

ನಗರದ ವ್ಯಾಲಿವ್ಯೂ ಹೋಟೇಲ್ ಸಭಾಂಗಣದಲ್ಲಿ ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್, ಕೊಡಗು ಹೋಂಸ್ಟೇ ಅಸೋಸಿಯೇಷನ್, ಕೊಡಗು ಚೇಂಬರ್ ಆಫ್ ಕಾಮರ್ಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವೆಂಕಟ್‌ರಾಜಾ ಪ್ರವಾಸೋದ್ಯಮ ಸಂಘಟನೆಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಾನು ಜಿಲ್ಲಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ ಎರಡೂವರೆ ವರ್ಷಗಳ ಕಾಲವೂ ಜಿಲ್ಲೆಯ ಜನತೆ ತನಗೆ ಪ್ರೀತಿ, ವಿಶ್ವಾಸ ತೋರಿ ಕುಟುಂಬ ನೀಡುವ ಮಮತೆಯನ್ನೇ ನೀಡಿದ್ದರು. ಕೊಡಗಿನ ಭವಿಷ್ಯದ ದೃಷ್ಟಿಯಿಂದ ಸ್ಪಷ್ಟ ಗುರಿಯೊಂದಿಗೆ ಅಭಿವೃದ್ಧಿಯತ್ತ ಗಮನ ನೀಡಿ ಎಂದು ಕಿವಿಮಾತು ಹೇಳಿದ ವೆಂಕಟರಾಜಾ, ಗುರಿ ಸಾಧನೆಯ ನಿಟ್ಟಿನಲ್ಲಿ ಕೊಡಗಿನ ಜನತೆ ತಮ್ಮ ಛಲದ ಹೋರಾಟ ಮರೆಯಬಾರದು ಎಂದು ಹೇಳಿದರು.

ದಿಲ್ಲಿಯಲ್ಲಿ ಯಮುನಾ ನದಿ ಕಲುಷಿತಗೊಂಡು ಕುಡಿಯಲು ಯೋಗ್ಯವಿಲ್ಲದಂತೆ ಆಗಿರುವುದನ್ನು ಪ್ರಸ್ತಾಪಿಸಿದ ಅವರು ಕೊಡಗಿನಲ್ಲಿ ಉಗಮಿಸಿ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಸಾಗುವ ಕಾವೇರಿ ಅತ್ಯಂತ ಪವಿತ್ರ ನದಿಯಾಗಿದೆ. ಹೀಗಾಗಿ ಕೊಡಗಿನ ಪ್ರತೀಯೋರ್ವರೂ ಕಾವೇರಿಯ ಪಾವಿತ್ರ‍್ಯತೆ ಹಾಳಾಗಲು ಬಿಡಬಾರದು ಎಂದೂ ಕರೆ ನೀಡಿದರು. ಕೊಡಗನ್ನು ಸ್ವಚ್ಛವಾಗಿ ಸುಂದರವಾಗಿ ಕಾಪಾಡಬೇಕಾದಲ್ಲಿ, ಪರಿಸರ ಸ್ಮೇಹಿ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ ಎಂದೂ ಅವರು ಅಭಿಪ್ರಾಯಪಟ್ಟರು. ಜಿಲ್ಲೆಯಿಂದ ವರ್ಗವಾಗಿದ್ದರೂ ಕೊಡಗಿನ ಅಭಿವೃದ್ಧಿ ನಿಟ್ಟಿನಲ್ಲಿ ಎಲ್ಲಿಯೇ ಇದ್ದರೂ ತಾನು ಸಲಹೆಗಳನ್ನು ನೀಡಿ ಎಲ್ಲಾ ರೀತಿಯ ಸಹಾಯ ಮಾಡುವುದಾಗಿಯೂ ವೆಂಕಟ್‌ರಾಜಾ ಭರವಸೆ ನೀಡಿದರು.

ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ಪ್ರಯತ್ನದಿಂದಲೇ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಸೋಸಿಯೇಷನ್‌ಗೆ ಪ್ರವಾಸೋದ್ಯಮ ಕಛೇರಿಯಲ್ಲಿಯೇ ತನ್ನದೇ ಆದ ಕಛೇರಿ ಲಭಿಸುವಂತಾಯಿತು. ಅಂತೆಯೇ ಕೊಡಗು ಪ್ರವಾಸೋದ್ಯಮದ ಸಮಗ್ರ ದಾಖಲೆಗಳಿರುವ ಕಾಫಿ ಟೇಬಲ್ ಇವರ ಪ್ರಯತ್ನದಿಂದ ಪ್ರಕಟವಾಯಿತು ಎಂದು ಸ್ಮರಿಸಿದರು. ಕುಂಡ್ಯೋಳAಡ ಹಾಕಿ ಉತ್ಸವದ ಸಂದರ್ಭ ಸ್ವತ ಹಾಕಿಪಟು ವೆಂಕಟ್ ರಾಜಾ ಮೈದಾನಕ್ಕಿಳಿದು ಹಾಕಿ ಆಟವನ್ನು ಆಡಿ ಜನಮನ ಗೆದ್ದಿರುವುದನ್ನೂ ದಿನೇಶ್ ಈ ಸಂದರ್ಭ ಸ್ಮರಿಸಿದರು. ಕೊಡಗಿನ ಜಮ್ಮಾ ಹಿಡುವಳಿದಾರರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿಯೂ ವೆಂಕಟ್‌ರಾಜಾ ಅವರ ತಾಂತ್ರಿಕ ಮಾಹಿತಿಗಳು ಸರ್ಕಾರಕ್ಕೆ ನೆರವಾಯಿತೆಂದೂ ಅವರು ನೆನಪಿಸಿದರು.

ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕೇವಲ ಆಶ್ವಾಸನೆಗೆ ಮಾತ್ರ ಸೀಮಿತರಾಗದೆ ಕೊಡಗಿನ ಅಭಿವೃದ್ಧಿ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಯೋಜನೆಗಳನ್ನು ವೆಂಕಟ್‌ರಾಜಾ ಜಾರಿಗೊಳಿಸಿದ್ದರು ಎಂದು ಶ್ಲಾಘಿಸಿದರು. ಪ್ರವಾಸೋದ್ಯಮದ ಬೆಳವಣಿಗೆಗೆ ೪೦ ಅಂಶಗಳ ಕಾರ್ಯಸೂಚಿಯನ್ನೂ ವೆಂಕಟ್‌ರಾಜಾ ತಯಾರಿಸಿದ್ದು ಅವರ ದೂರÀದೃಷ್ಟಿತ್ವಕ್ಕೆ ಸಾಕ್ಷಿ ಎಂದೂ ಹೇಳಿದರು.

ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿಗಣೇಶ್ ಮಾತನಾಡಿ, ಸರಳತೆಯಿಂದ ಜನರ ಮನಗೆದ್ದಿದ್ದ ವೆಂಕಟ್‌ರಾಜಾ, ಕೊಡಗಿನ ಹೋಂಸ್ಟೇಗಳ ಅನೇಕ ವರ್ಷಗಳ ಸಮಸ್ಯೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆತಿಥ್ಯದ ಪರಿಕಲ್ಪನೆಗೆ ಹೊಸ ರೂಪು ನೀಡಿದ ಕೀರ್ತಿ ವೆಂಕಟ್‌ರಾಜಾ ಅವರಿಗೆ ಸಲ್ಲಬೇಕು ಎಂದು ಹೆಮ್ಮೆಯಿಂದ ನುಡಿದರು.

ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಸಲಹೆಗಾರ ಜಿ.ಚಿದ್ವಿಲಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗನ್ನು ಓರ್ವ ಅಧಿಕಾರಿಯಂತೆ ವೆಂಕಟ್‌ರಾಜಾ ನೋಡಲಿಲ್ಲ. ಬದಲಿಗೆ ಕೊಡಗಿನ ನೆಲ, ಇಲ್ಲಿನ ಸಂಸ್ಕೃತಿ, ಸ್ಥಳೀಯ ಆಚಾರ, ವಿಚಾರಗಳನ್ನು ಅಧ್ಯಯನ ಮಾಡಿ ಅವುಗಳನ್ನು ಪ್ರೀತಿಸಿದರು. ಕೊಡಗಿನ ಭವಿಷ್ಯದ ದೃಷ್ಟಿಯಿಂದ ಈ ಜಿಲ್ಲೆಗೆ ಏನು ಬೇಕೆಂಬುದನ್ನು ಅವರು ಕಾರ್ಯಯೋಜನೆ ರೂಪದಲ್ಲಿ ದಾಖಲಿಸಿದರು. ಅನೇಕ ಯೋಜನೆಗಳನ್ನು ಸ್ಥಳೀಯರ ಹಿತಚಿಂತನೆಗಾಗಿ ಜಾರಿಗೊಳಿಸಿದ್ದರು. ಅಪರೂಪದ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸಿದ್ದ ವೆಂಕಟ್‌ರಾಜಾ ಅವರನ್ನು ಕೊಡಗಿನ ಜನತೆ, ಸಂಘಸAಸ್ಥೆಗಳು ಸದಾ ಸ್ಮರಿಸುತ್ತಿರುತ್ತದೆ ಎಂದು ಹೆಮ್ಮೆಯಿಂದ ನುಡಿದರು. ಕೊಡಗಿನ ಪ್ರವಾಸೋದ್ಯಮಕ್ಕೆ ವೆಂಕಟ್‌ರಾಜಾ ಅವರ ಕೊಡುಗೆ ಅಪಾರ ಮತ್ತು ಮಹತ್ವದ್ದಾಗಿತ್ತು ಕೊಡಗಿನಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಪ್ರಕೃತಿ ನಾಶವಾಗಬಾರದು, ಪರಿಸರ ಉಳಿಸಬೇಕು ಎಂಬ ಧ್ಯೇಯವನ್ನೂ ಅವರು ಹೊಂದಿದರು ಎಂದೂ ನುಡಿದರು.

ಪತ್ರಕರ್ತ ಅನಿಲ್ ಹೆಚ್.ಟಿ ಮಾತನಾಡಿ, ಬಹಳ ದೂರದೃಷ್ಟಿತ್ವ ಹೊಂದಿದ್ದ ಅದಿಕಾರಿಯಾಗಿದ್ದ ವೆಂಕಟ್‌ರಾಜಾ ಕೊಡಗಿನ ಪ್ರಗತಿಗೆ ನೀಡಿದ್ದ ಅನೇಕ ಸಲಹೆಗಳು ಭವಿಷ್ಯದ ಹಿತದೃಷ್ಟಿಯಿಂದ ಬಹಳ ಮುಖ್ಯವಾಗಿದ್ದವು. ಆದರೆ ಇಂಥ ಸಲಹೆಗಳನ್ನು ಸ್ವೀಕರಿಸಿ ಜಾರಿಗೊಳಿಸುವ ನಿಟ್ಟಿನಲ್ಲಿ ಜನರು ಒಗ್ಗಟ್ಟಾಗಬೇಕೆಂದು ಅಭಿಪ್ರಾಯಪಟ್ಟರು. ಸೈನಿಕಶಾಲೆ, ಆದಿವಾಸಿ ತಂಡಗಳು, ಸರ್ಕಾರಿ ಶಾಲಾ ಮಕ್ಕಳನ್ನು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಕಾಶ ನೀಡುವ ಮೂಲಕ ಕೊಡಗಿನ ಪ್ರತಿಭೆಗಳಿಗೆ ಹೆಚ್ಚು ವೇದಿಕೆ ಕಲ್ಪಿಸುವ ಚಿಂತನೆ ವೆಂಕಟ್‌ರಾಜಾ ಅವರಲ್ಲಿತ್ತು ಎಂದು ಮೆಲುಕು ಹಾಕಿದ ಅನಿಲ್, ಮೈಸೂರು, - ಬಸವನಹಳ್ಳಿ ನಡುವಿನ ಚತುಷ್ಪಥ ಹೆದ್ದಾರಿ ನಿರ್ಮಾಣವಾದ ಬಳಿಕ ಮಡಿಕೇರಿಗೆ ವಾಹನ ದಟ್ಟಣೆ ಖಂಡಿತಾ ಎಂದು ಸಭೆಯೊಂದರಲ್ಲಿ ಎಚ್ಚರಿಸಿದ್ದ ವೆಂಕಟ್‌ರಾಜಾ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿ, ಈಗಲೇ ಮಡಿಕೇರಿ ನಗರಕ್ಕೆ ಸೂಕ್ತ ಮೇಲ್ ಸೇತುವೆ ಅಥವಾ ರಿಂಗ್ ರೋಡ್ ನಿರ್ಮಾಣಕ್ಕೆ ಮುಂದಾಗಬೇಕಾದ ಅಗತ್ಯವಿದೆ ಎಂದೂ ಅನಿಲ್ ಪ್ರತಿಪಾದಿಸಿದರು.

ಕೂರ್ಗ್ ಹೊಟೇಲ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ನಾಸೀರ್ ಸ್ವಾಗತಿಸಿ, ಹೋಂಸ್ಟೇ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ ವಂದಿಸಿದ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ ಪ್ರವಾಸೋದ್ಯಮಿಗಳು ಹಾಜರಿದ್ದರು.