ವೀರಾಜಪೇಟೆ, ಜ. ೧೨ : ಸಾರ್ವಜನಿಕರ ಬೇಡಿಕೆಯಂತೆ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ವಿಶೇಷ ಅನುದಾನದ ಮೂಲಕ ರಸ್ತೆಯನ್ನು ನಿರ್ಮಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಕರೆ ನೀಡಿದರು.

ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು. ವೀರಾಜಪೇಟೆ ಪುರಸಭೆಯ ವ್ಯಾಪ್ತಿಯಲ್ಲಿನ ನಿಸರ್ಗ ಬಡಾವಣೆಯಲ್ಲಿ ರೂ ೨೪ ಲಕ್ಷ ಹಾಗೂ ರೂ ೫ ಲಕ್ಷ ವೆಚ್ಚದಲ್ಲಿ ವಿಜಯನಗರ ಬಡಾವಣೆ ವ್ಯಾಪ್ತಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಎರಡು ಕಾಂಕ್ರೀಟೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು. ಮಳೆಗಾಲದಲ್ಲಿ ಈ ರಸ್ತೆ ತೆರಳಲು ತುಂಬಾ ಕಷ್ಟಕರವಾಗಿರುವುದನ್ನು ಸ್ಥಳೀಯರು ನನ್ನ ಗಮನಕ್ಕೆ ತಂದಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗುವುದನ್ನು ಮನಗಂಡು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಬಡಾವಣೆ ಮಾಡುವಾಗ ಮೂಲಭೂತ ಸೌಕರ್ಯಗಳನ್ನು ಬಡಾವಣೆ ಮಾಡಿದವರೇ ನೀಡಬೇಕು. ಆದರೆ ಸ್ಥಳೀಯ ಆಡಳಿತದ ಮೇಲೆ ಹೊರಿಸಿದರೆ ಈ ತರದ ಸಮಸ್ಯೆಗಳು ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಬೇಡಿಕೆಯಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭ ಕೆಕೆ ಗ್ರೂಪ್ಸ್ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಪುರಸಭೆ ವ್ಯಾಪ್ತಿಯ ವಿಜಯನಗರ ೩ನೇ ಹಂತದ ರಸ್ತೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್ ಎಚ್ ಮತೀನ್, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಪಿ.ಕೆ., ಅಭಿಯಂತರರಾದ ಹೇಮ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಮಾಜಿ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಮಾಜಿ ಸದಸ್ಯರುಗಳಾದ ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ, ಅತಿಫ್ ಮನ್ನ, ರಜಿನಿಕಾಂತ್, ಪೃಥ್ವಿನಾಥ್, ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಜಲಿಲ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ರಫೀಕ್, ಪಕ್ಷದ ಪ್ರಮುಖರಾದ ನಾಸಿರ್, ಕೆ.ಕೆ. ಗ್ರೂಪ್‌ನ ಕಾಳಮಂಡ ಜಗತ್, ಸೇರಿದಂತೆ ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.