ಸುಂಟಿಕೊಪ್ಪ, ಜ. ೧೨: ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸುತ್ತ ಮುತ್ತಲಿನ ಕಾಫಿ ತೋಟಗಳ ಮಾಲೀಕರಿಗೆ ಹೊರ ರಾಜ್ಯಗಳಿಂದ ಆಗಮಿಸಿರುವ ವಲಸೆ ಕೂಲಿ ಕಾರ್ಮಿಕರನ್ನು ತೋಟದ ಲೈನ್‌ಮನೆಗಳಲ್ಲಿ ಇರಿಸಿಕೊಂಡಿದ್ದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಕಾಫಿ ಬೆಳೆಗಾರರಿಗೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಸೂಚಿಸಿದರು.

ಶನಿವಾರದಂದು ಸುಂಟಿಕೊಪ್ಪ ಪೊಲೀಸ್ ವ್ಯಾಪ್ತಿಯ ವಿವಿಧ ತೋಟಗಳ ಮಾಲೀಕರು ಹಾಗೂ ವ್ಯವಸ್ಥಾಪಕರುಗಳೊಂದಿಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಹೊರ ರಾಜ್ಯಗಳಿಂದ ಕೂಲಿ ಕೆಲಸಕ್ಕೆ ಆಗಮಿಸಿ ನೆಲೆಸಿರುವ ಕಾರ್ಮಿಕರ ಸಂಪೂರ್ಣ ಮಾಹಿತಿಯ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ಒದಗಿಸುವಂತೆ ಸೂಚಿಸಿದರಲ್ಲದೆ, ಅವರ ನಡುವಳಿಕೆಗಳಲ್ಲಿ ಸಂಶಯಗಳು ಮೂಡಿ ಬಂದಲ್ಲಿ ಕೂಡಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು.