ವೀರಾಜಪೇಟೆ, ಜ. ೧೨: ಕೊಡಗು ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ವತಿಯಿಂದ ೫ನೇ ವರ್ಷದ ವಾರ್ಷಿಕೋತ್ಸವ ಹಾಗೂ ೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಆರೋಗ್ಯ ಕಚೇರಿ ಮಡಿಕೇರಿಯಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಕೆ.ಎಂ. ಅವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿ, ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಬಹಳ ಅಗತ್ಯವಿದ್ದು ಇವರಿಂದಲೇ ಸಾಂಕ್ರಾಮಿಕ ರೋಗಗಳು ನಿರ್ಮೂಲನೆ ಮತ್ತು ನಿಯಂತ್ರಣಕ್ಕೆ ಬಂದಿರುವುದು ಶ್ಲಾಘನೀಯವೆಂದರು. ತಮ್ಮ ವೃತ್ತಿಗೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸುವ ಮೂಲಕ ಸಂಘಟನೆ ಬೆಳೆಸಿಕೊಂಡು ಹೋಗುವಂತೆ ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಬಿ.ಎಲ್. ಶ್ರೀನಿವಾಸ್ ಮತ್ತು ಜಿಲ್ಲಾ ಎನ್ಫೋಸ್ ಮೆಂಟ್ ಅಧಿಕಾರಿಗಳಾದ ಡಾ. ಆನಂದ್.ಎನ್ ಅವರು ೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ ಶುಭ ಕೋರಿದರು.

ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿದ್ದ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಕೊಡಗು ಜಿಲ್ಲಾ ಶಾಖೆ ಅಧ್ಯಕ್ಷ ಜಿ.ವಿ. ಶ್ರೀನಾಥ್ ಅವರು ಮಾತನಾಡಿ ನಮ್ಮ ವೃಂದವು ಸಾರ್ವಜನಿಕ ಬದುಕಿನಲ್ಲಿ ಸಾಂಕ್ರಾಮಿಕ ರೋಗಗಳು ಬರದಂತೆ ಮುಂಜಾಗ್ರತಾ ಕ್ರಮವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.

ಇದೇ ಸಂದರ್ಭ ಪದೊನ್ನತ್ತಿ ಪಡೆದು ಹಾಸನ ಜಿಲ್ಲೆಗೆ ವರ್ಗಾವಣೆ ಆದ ಜಿಲ್ಲಾ ಮೇಲ್ವಿಚಾರಕ ಕಾಂತರಾಜು ಹಾಗೂ ಮೂರ್ನಾಡು ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ದ.ಕನ್ನಡಕ್ಕೆ ವರ್ಗಾವಣೆ ಆದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚರಣ್ ಕುಮಾರ್ ಅವರಿಗೆ ಗೌರವಿಸಲಾಯಿತು.