ಸೋಮವಾರಪೇಟೆ, ಜ. ೧೨: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಬೆಳಕಿಗೆ ಬರುವುದೇ ಪ್ರಾಥಮಿಕ ಹಂತದಲ್ಲಿ. ಈ ಹಿನ್ನೆಲೆ ಎಳೆಯ ವಯಸ್ಸಿನಿಂದಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ನಿವೃತ್ತ ಎಎಸ್‌ಐ ಹಾಗೂ ಕ್ರೀಡಾ ತರಬೇತುದಾರ ಅಂತೋಣಿ ಡಿಸೋಜ ಅಭಿಪ್ರಾಯಿಸಿದರು.

ಪಟ್ಟಣದ ಓ.ಎಲ್.ವಿ. ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ, ಸತತ ಅಭ್ಯಾಸದಿಂದ ಯಾವುದೇ ಕ್ರೀಡೆಯಲ್ಲಿ ಭಾಗವಹಿಸಿದರೂ ಯಶಸ್ಸು ಗಳಿಸಬಹುದು. ಅಲ್ಲದೇ ಕ್ರೀಡಾ ಜಿಲ್ಲೆಯಾದ ಕೊಡಗಿನಿಂದ ೧೪ ಹಾಕಿ ಒಲಂಪಿಯನ್, ಈರ್ವರು ಅಥ್ಲೆಟಿಕ್ಸ್ ಒಲಂಪಿಯನ್ ಮೂಡಿಬಂದಿರುವುದು ಹೆಮ್ಮೆಯ ವಿಷಯ. ಇದರೊಂದಿಗೆ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಒಲಂಪಿಯನ್ ಅರ್ಜುನ್ ಹಾಲಪ್ಪ ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.

ಆರಂಭದಲ್ಲಿ ಶಾಲೆಯ ಆರು ಕ್ರೀಡಾ ತಂಡ ಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶಾಲಾ ತಂಡದ ನಾಯಕ ಸುಪ್ರೀತ್ ತಂಡವನ್ನು ಮುನ್ನಡೆಸಿದರು. ಶಾಲಾ ವಾದ್ಯ ವೃಂದ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪಥ ಸಂಚಲನದಲ್ಲಿ ಟುಲಿಪ್ ತಂಡ ಪ್ರಥಮ, ಡಪೋಡಿಲ್ಸ್ ದ್ವಿತೀಯ, ಬ್ಲೂ ಬೆಲ್ಸ್ ತಂಡ ತೃತೀಯ ಸ್ಥಾನ ಪಡೆದವು.

ಓ.ಎಲ್.ವಿ. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ನಿರ್ಮಲ, ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಆಡಿಲೇಡ್ ಡಿಸೋಜ, ಹಿರಿಯ ಶಿಕ್ಷಕಿ ಆಸೆಸ್ಸ್ ಡಿಸೋಜ ಮತ್ತು ಸಹ ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕ್ರೀಡಾಪಟುಗಳಿಗೆ ೧೦೦, ೨೦೦ ಮೀಟರ್ ಓಟ, ಹಗ್ಗ ಜಗ್ಗಾಟ, ಕಬಡ್ಡಿ, ಖೋ ಖೋ ಸೇರಿದಂತೆ ವಿವಿಧ ಅಥ್ಲೇಟಿಕ್ಸ್ ಸ್ಪರ್ಧೆಗಳನ್ನು ನಡೆಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್, ಯುವ ರಂಜನ್, ಶಿಕ್ಷಕರುಗಳಾದ ರೀಟಾ ಲೋಬೊ, ಮೆರಿಟಾ ಜಾನ್ ಪಿಂಟೊ, ಸಹನ ಅವರುಗಳು ಕ್ರೀಡಾಕೂಟ ನಿರ್ವಹಿಸಿದರು. ಸಮಾರಂಭದಲ್ಲಿ ಹಿರಿಯ ಕ್ರೀಡಾ ತರಬೇತುದಾರ ಅಂತೋಣಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು.