ಚೆಯ್ಯಂಡಾಣೆ, ಜ. ೧೨ : ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಂಬು ದೇವಾಲಯ, ಅಂಗನವಾಡಿ ಪನ್ನಡ್ಕ, ಬಾಲಂಬಿ ಅಂಗನವಾಡಿ ಕೇಂದ್ರಗಳಲ್ಲಿ ಅನೀಮಿಯ ಅರಿವು ಕಾರ್ಯಾಗಾರ ಹಾಗೂ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ಪಾಲ್ಗೊಂಡು ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬAತೆ ಬೆಳೆಯುವ ಮಕ್ಕಳಿಗೆ ಕಾಲಕ್ಕೆ ತಕ್ಕಂತೆ ಆರೋಗ್ಯ ತಪಾಸಣೆಗಳನ್ನು ನಡೆಸುವುದರಿಂದ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು. ಬಳಿಕ ಚೆಂಬು ಗ್ರಾಮದ ದೇವಾಲಯ ಅಂಗನವಾಡಿ ಕೇಂದ್ರದ ಕೈತೋಟ ಹಾಗೂ ಪನ್ನಡ್ಕ ಅಂಗನವಾಡಿ ಕೇಂದ್ರದ ಸುತ್ತಲೂ ಅಳವಡಿಸಲಾಗುತ್ತಿರುವ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ಶಿಬಿರದಲ್ಲಿ ಆರ್ ಬಿ ಎಸ್ ಕೆ ತಂಡದ ವೈದ್ಯರಾದ ಡಾ. ಪೂಜಾ ಹಾಗೂ ಶುಶ್ರೂಷಕಿ ಅಮೃತ ಅವರ ನೇತೃತ್ವದಲ್ಲಿ ಮಕ್ಕಳ ತೂಕ, ಎತ್ತರ ಪರಿಶೀಲಿಸಿ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಅನೀಮಿಯ ಮಟ್ಟ ಕಡಿಮೆ ಇರುವ ಮಕ್ಕಳಿಗೆ ವಯಸ್ಸಿಗನುಗುಣವಾಗಿ ಔಷಧಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ,ರೇಖಾ, ಮೀನಾಕ್ಷಿ ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು, ಬಾಲ ವಿಕಾಸ ಸಮಿತಿಯ ಅಧ್ಯಕ್ಷರು ಸದಸ್ಯರು, ಪೋಷಕರು, ಮಕ್ಕಳು ಹಾಜರಿದ್ದರು.