ಶನಿವಾರಸಂತೆ: ಜ. ೧೨ : ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕ್ಯಾತೆ ಗ್ರಾಮದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಹಾಗೂ ಸಮಾಜ ಸುಧಾರಕಿ ಫಾತಿಮಾ ಶೇಖ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ಶಿಕ್ಷಕಿ ಫಾತಿಮಾ ಶೇಖ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅತಿಥಿ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿ ಪಿ.ಸಿ. ಫ್ರೆಡ್ಡಿ ಮಾತನಾಡಿ, ಶಿಕ್ಷಕಿ ಫಾತಿಮಾ ಶೇಖ್ ಶಿಕ್ಷಣದ ಮೂಲಕ ಸಾಧನೆ ಮಾಡಿದ ಮೊದಲ ಮುಸ್ಲಿಂ ಮಹಿಳೆ.ಸ್ವತಃ ಶಿಕ್ಷಕಿಯಾಗಿ ಶಿಕ್ಷಣದ ಮೂಲಕ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.ಇಂಥಾ ಮಹಾನ್ ವ್ಯಕ್ತಿಗಳ ಆದರ್ಶವನ್ನು ಹೆಣ್ಣುಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮತ್ತೋರ್ವ ಮುಖ್ಯ ಅತಿಥಿ ಸೋಮವಾರಪೇಟೆಯ ಲೇಖಕಿ ರುಬಿನಾ ಮಾತನಾಡಿ, ಬಾಲಕಿಯರ ಶಿಕ್ಷಣ ಕ್ಷೇತ್ರಕ್ಕೆ ಫಾತಿಮಾ ಶೇಖ್ ಅವರು ಸಲ್ಲಿಸಿದ ಸೇವೆ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಶಕ್ತಿ ಎಂಬ ನಂಬಿಕೆಯಿAದ ಫಾತಿಮಾ ಶೇಖ್ ಶೋಷಿತ ಹಾಗೂ ಹಿಂದುಳಿದ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಿದರು.ವೈದಿಕಶಾಹಿ ಕಟ್ಟುಪಾಡುಗಳಲ್ಲಿ ಸಿಲುಕಿದ್ದ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಶಿಕ್ಷಣದ ಮೂಲಕ ಬೆಳಗಿಸಿದ ಮಹಾನ್ ಶಿಕ್ಷಕಿಯರ ಸಾಲಿನಲ್ಲಿ ಫಾತಿಮಾ ಶೇಖ್ ಹಾಗೂ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಪ್ರಮುಖರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲ ಡಾ.ಕೆ.ಗುರುಸ್ವಾಮಿ ಮಾತನಾಡಿ, ಕಳೆದ ಸಾಲಿನಲ್ಲಿ ಶಾಲೆಯ ೧೦ ನೇ ತರಗತಿಯ ವಿದ್ಯಾರ್ಥಿಗಳು ಸಿಬಿಎಸ್ಸಿ ಪರೀಕ್ಷೆಯಲ್ಲಿ ಹಾಗೂ ಪಿಯು ವಿದ್ಯಾಥಿಗಳು ಅಂತಿಮ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಪಡೆದಿರುತ್ತಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಇಲಾಖೆಯ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆ ಪೋಷಕರಿಗೆ ಮನವಿ ಮಾಡಿದರು. ಸಮಾಜ ಸೇವಕ ಎಚ್.ಎಂ.ರಘು , ಶಿಕ್ಷಕರು, ಪೋಷಕರು ಹಾಜರಿದ್ದರು.ವಿದ್ಯಾರ್ಥಿಗಳಾದ ಅಶ್ವದಿ ಪ್ರಾರ್ಥಿಸಿ, ಆಶಿಯಾ ಸ್ವಾಗತಿಸಿ, ಸಮೀಕ್ಷಾ ವಂದಿಸಿದರು.