ಮಡಿಕೇರಿ ಜ. ೧೩: ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ಅವರು ರೋಟರಿ ಮಡಿಕೇರಿಗೆ ಭೇಟಿ ನೀಡಿದರು. ರೋಟರಿಯ ಹಿರಿಯ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಿದ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಿದರು. ನಗರದ ರೋಟರಿ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರೋಟರಿ ಮೂಲಕ ಸಮಾಜ ಸೇವೆಗಾಗಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಸೇವೆಯಲ್ಲಿ ಉತ್ಸಾಹ ತೋರಬೇಕು, ಸೇವೆಗಾಗಿ ಇತರರನ್ನೂ ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಕಳಕಳಿಯನ್ನು ಹೊಂದಿರುವ ರೋಟರಿ ಸಂಸ್ಥೆ ರಕ್ತ ಸಂಗ್ರಹ ಘಟಕ ಮತ್ತು ಚರ್ಮಗಳ ಶಿಥಿಲೀಕರಣ ಘಟಕಗಳ ಸ್ಥಾಪನೆಗೆ ಯೋಜನೆ ರೂಪಿಸಿದೆ. ವಿಶ್ವದೆಲ್ಲಡೆ ಪೋಲಿಯೋ ಲಸಿಕೆ ಅಭಿಯಾನವನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆ. ತನ್ನ ನಿಸ್ವಾರ್ಥ ಸೇವೆಯ ಮೂಲಕವೇ ರೋಟರಿ ಸಂಸ್ಥೆ ಎಲ್ಲರ ಗಮನ ಸೆಳೆದಿದೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರೋಟರಿಯ ಸಹಾಯಕ ಗವರ್ನರ್ ದಿಲನ್ ಚಂಗಪ್ಪ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು.
ಝೋನಲ್ ಲೆಫ್ಟಿನೆಂಟ್ ರೋಟರಿಯನ್ ಕೆ.ಸಿ.ಕಾರ್ಯಪ್ಪ, ರೋಟರಿ ಮಡಿಕೇರಿ ಅಧ್ಯಕ್ಷರಾದ ಲಲಿತ ರಾಘವನ್ ಹಾಗೂ ಕಾರ್ಯದರ್ಶಿ ಬಿ.ಎಂ.ಸೋಮಣ್ಣ ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯಲ್ಲಿ ೫೦ ವರ್ಷ ಸೇವೆ ಸಲ್ಲಿಸಿದ ಹಿರಿಯರಾದ ಡಾ.ಮನೋಹರ್ ಜಿ.ಪಾಟ್ಕರ್ ಹಾಗೂ ಅನಂತ ಸುಬ್ಬರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಡಿಕೇರಿಯ ಸರಕಾರಿ ಪ್ರೌಢ ಶಾಲೆ ಮತ್ತು ಪಿಯುಸಿಯ ವಿದ್ಯಾರ್ಥಿಗಳಿಗೆ ಒಟ್ಟು ೪೦ ಸಾವಿರ ರೂ.ಗಳ ವಿದ್ಯಾರ್ಥಿವೇತನವನ್ನು ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ವಿತರಿಸಿದರು.