ಅನಿಲ್ ಹೆಚ್.ಟಿ.
ಮಡಿಕೇರಿ, ಜ.೧೩ : ತನ್ನ ಅಮ್ಮನನ್ನೇ ದೇವರೆಂದು ಪರಿಗಣಿಸಿದ ಮಗನೋರ್ವ ಆಕೆಯ ಮನದ ಇಚ್ಚೆಯಂತೆ ದೇಶವ್ಯಾಪಿ ಸುತ್ತಿಸಿದ ಕಥೆಯಿದು. ಬರೋಬ್ಬರಿ ೧ ಲಕ್ಷ ಕಿಲೋಮೀಟರ್‌ಗಳನ್ನು ೪ ದೇಶ ವ್ಯಾಪ್ತಿಯಲ್ಲಿ ಪರ್ಯಟನೆ ಮಾಡಿಸುವ ಮೂಲಕ ಆಧುನಿಕ ಶ್ರವಣ ಕುಮಾರ ಎಂಬ ಖ್ಯಾತಿಗೆ ಪಾತ್ರರಾದ ಮೈಸೂರು ಮೂಲದ ಕೃಷ್ಣಕುಮಾರ್ ಕಥೆ ನಿಜಕ್ಕೂ ಮಾದರಿಯಾದದ್ದು. ಅಂದAತೆ ಅಮ್ಮನನ್ನು ಈ ರೀತಿ ಪರ್ಯಟನೆ ಮಾಡಿಸಿದ್ದ ರೈಲು, ವಿಮಾನದಲ್ಲಿ ಖಂಡಿತಾ ಅಲ್ಲ. ಚೇತಕ್ ಸ್ಕೂಟರ್‌ನಲ್ಲಿಯೇ ಹಿಂಬದಿ ಕೂರಿಸಿಕೊಂಡು ಅಮ್ಮನ ಇಷ್ಟಾರ್ಥ ನೆರವೇರಿಸಿದ ಮಹಾನುಭವ ಇವರು ಮಡಿಕೇರಿಗೆ ಬಂದಿದ್ದ ಕೃಷ್ಣಕುಮಾರ್ ಮತ್ತು ಅವರ ತಾಯಿ ಚೂಡರತ್ನಮ್ಮ ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು.
ಮಡಿಕೇರಿಯ ಕೊಡಗು ಶಿಶುಕಲ್ಯಾಣ ಸಂಸ್ಥೆಯಲ್ಲಿ ಆಯೋಜಿತ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಕೃಷ್ಣ ಕುಮಾರ್ ತನ್ನ ಮಾತೃ ಸೇವಾ ಸಂಕಲ್ಪ ಯಾತ್ರೆ ಹೆಸರಿನ ಪರ್ಯಟನೆ ಬಗ್ಗೆ ಮಾಹಿತಿ ನೀಡಿದ್ದು ಹೀಗೆ.
ಕೂಡು ಕುಟುಂಬದಲ್ಲಿ ಬೆಳೆದಿದ್ದರಿಂದಾಗಿ ಅಡುಗೆ ಮನೆಗಷ್ಟೇ ನನ್ನ ಅಮ್ಮ ಸೀಮಿತವಾಗಿದ್ದಳು. ಅಪ್ಪನ ಹತ್ತಿರ ಚೇತಕ್ ಸ್ಕೂಟರ್ ಇತ್ತು. ಅಪ್ಪ ದಕ್ಷಿಣಾಮೂರ್ತಿಯವರ ಕಾಲಾನಂತರ ಅಮ್ಮ ಮಂಕಾಗಿದ್ದರು. ಯಾಕಮ್ಮ.. ಬೇಸರದಿಂದ ಇದ್ದೀಯಾ, ದೇಶದ ಯಾವುದಾದರು ಜಾಗ ನೋಡಬೇಕೆಂದು ಆಸೆ ಇದೆಯೇ ಎಂದು ಕೇಳಿದೆ. ಅಮ್ಮ ಹೇಳಿದಳು.. ಮೈಸೂರು ಪಕ್ಕದ ಬೇಲೂರು ಹಳೇಬೀಡನ್ನೇ ಇನ್ನೂ ನೋಡಲಿಲ್ಲ. ದೇಶ ಹೇಗೆ ನೋಡೋದು ಮಗ?
ಕೂಡಲೇ ನನಗನ್ನಿಸಿತ್ತು, ಹೌದಲ್ಲ? ಅಮ್ಮನ ಮನಸ್ಸಿನಲ್ಲಿ ಏನೇನು ಆಸೆ ಇರುತ್ತದೆಯೇ? ಆಕೆ ಜೀವಂತವಾಗಿರುವಾಗಲೇ ಆಸೆ ಈಡೇರಿಸದೇ ಆಕೆಯ ಕಾಲಾನಂತರ ಆಸೆ ಈಡೇರಿಸಲಿಲ್ಲ ಎಂದು ಬೇಸರ ಪಡುವುದು ಬೇಡ ಎಂದುಕೊAಡೆ. ಹೀಗಾಗಿ ಬೆಂಗಳೂರಿನಲ್ಲಿ ಕೈ ತುಂಬಾ ಸಂಬಳ ಬರುತ್ತಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮೈಸೂರಿಗೆ ಬಂದೆ. ಅಮ್ಮನನ್ನು ನೋಡಿಕೊಳ್ಳಬೇಕೆಂದು ನಾನು ಮದುವೆ ಕೂಡ ಆಗಲಿಲ್ಲ.
ಅಮ್ಮ ಸ್ಟೂಟರ್‌ನಲ್ಲಿಯೇ ಟೂರ್ ಹೋಗೋಣವಾ ಎಂದು ಕೇಳಿದೆ. ಖಂಡಿತಾ ಮಗ ಎಂದರು. ಸರಿ ಎಂದು ೨೦೧೮ ರ ಜ.೧೬ ರಂದು ಚೇತಕ್ ಸ್ಕೂಟರ್ ಹಿಂಬದಿ ಅಮ್ಮನನ್ನು ಕೂರಿಸಿಕೊಂಡು ದೇಶ ಪರ್ಯಟನೆ ಪ್ರಾರಂಭಿಸಿಯೇ ಬಿಟ್ಟೆ. ಇದಕ್ಕೆ ಮಾತೃ ಸೇವಾ ಸಂಕಲ್ಪ ಯಾತ್ರೆ ಹೆಸರಿನಲ್ಲಿ ಭಾರತದ ವಿವಿಧ ರಾಜ್ಯಗಳು ಮಾತ್ರವೇ ಅಲ್ಲದೇ ಭಾರತದ ಪಕ್ಕದಲ್ಲಿನ ನೇಪಾಳ, ಬೂತಾನ್, ಮ್ಯಾನ್ಮಾರ್ ದೇಶ ಸೇರಿದಂತೆ ಒಂದು ಲಕ್ಷ ಕಿ.ಮೀ.ಗೂ ಹೆಚ್ಚಿನ ದೂರವನ್ನು ಕ್ರಮಿಸಿ, ಅಮ್ಮನಿಚ್ಛೆಯ ಪ್ರದೇಶಗಳನ್ನು, ತೀರ್ಥ ಕ್ಷೇತ್ರಗಳ ದರ್ಶನವನ್ನು ಅವರಿಗೆ ಮಾಡಿಸಿದೆ. ಚೇತಕ್ ಸ್ಕೂಟರ್‌ನಲ್ಲಿಯೇ ಯಾಕೆ ಎಂದರೆ, ಅಪ್ಪನಿಗೆ ಇಷ್ಟವಾಗಿದ್ದ ಸ್ಕೂಟರ್ ಅದು. ಹೀಗಾಗಿ ಆ ಸ್ಕೂಟರ್‌ನಲ್ಲಿ ಅಪ್ಪ ಕೂಡ ನಮ್ಮೊಂದಿಗೆ ಬರುತ್ತಿದ್ದಾರೆ ಎಂಬ ಫೀಲಿಂಗ್ ಬರುತ್ತಿತ್ತು. ರೈಲು, ವಿಮಾನದಲ್ಲಿ ಸಾಗಿದರೆ ಎಲ್ಲಾ ಸ್ಥಳಗಳನ್ನು ಇಷ್ಟೊಂದು ಹಾಯಾಗಿ ನೋಡಲಾಗುವುದಿಲ್ಲ. ಸ್ಕೂಟರ್‌ನಲ್ಲಿ ಪ್ರತೀ ಸ್ಥಳಕ್ಕೂ ಪಯಣಿಸುತ್ತಿರುವಂತೆಯೇ ಅಮ್ಮನಿಗೆ ಉಂಟಾಗುತ್ತಿದ್ದ ಆನಂದ ವರ್ಣಿಸಲು ಅಸಾಧ್ಯದಂತಿತ್ತು. ಇಂತಹ ದೃಶ್ಯ ಬೇರೆ ವಾಹನ ಪ್ರಯಾಣದಲ್ಲಿ ಕಾಣದು. ಊರಿಂದೂರಿಗೆ, ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಪಯಣಿಸುತ್ತ ಅಲ್ಲಿನ ಸುಂದರ ತಾಣಗಳನ್ನು, ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾ ಸಾಗಿರುವುದು ಅನೇಕರ ಅಚ್ಚರಿಗೆ ಕಾರಣವಾಗಿತ್ತು. ಉದ್ದೇಶ ಒಳ್ಳೆಯದಿದ್ದಾಗ ಯಾವುದೇ ಸಮಸ್ಯೆ ಬಾರದು ಎಂಬುದಕ್ಕೆ ನಮ್ಮ ಪರ್ಯಟನೆೆಯೇ ಉದಾಹರಣೆ. ಯಾಕೆಂದರೆ ಎಲ್ಲಿಯೂ ಸ್ಕೂಟರ್ ತಾಂತ್ರಿಕ ಸಮಸ್ಯೆ ಎದುರಿಸಲಿಲ್ಲ. ಎಲ್ಲಾ ಕಡೆಯೂ ಜನರು ನಮ್ಮನ್ನು ಆದರದಿಂದ ಸ್ವಾಗತಿಸಿದರು. ಹೀಗಾಗಿ ತಂಗಲು ಊಟತಿಂಡಿಗೆ ಎಲ್ಲಿಯೂ ಸಮಸ್ಯೆಯಾಗಲೇ ಇಲ್ಲ. ಅಮ್ಮನ ಆಶೀರ್ವಾದ ಪಡೆಯಲು ಸರತಿ ಸಾಲಿನಲ್ಲಿ ಜನ ನಿಲ್ಲುತ್ತಿದ್ದ ನೋಟವೂ ಅನನ್ಯವಾಗಿತ್ತು.
“ನಿನಗೆ ಇಡೀ ಭಾರತವನ್ನು ತೋರಿಸುತ್ತೇನೆ'' ಎಂದು ನಾನು ಸಂಕಲ್ಪದAತೆ ಅಮ್ಮನಿಗೆ ನೀಡಿದ್ದ ಭರವಸೆ ಕಳೆದ ಅಕ್ಟೋಬರ್‌ನಲ್ಲಿ ಸಂಪೂರ್ಣವಾಗಿದೆ. ಹೀಗಿದ್ದರೂ ಅಮ್ಮನೊಂದಿಗೆ ಬಜಾಜ್ ಸ್ಕೂಟರ್ ಹತ್ತಿ ಇಂದಿಗೂ ಇಳಿದಿಲ್ಲ! ಅಮ್ಮ-ಮಗ ಬಹುಶಃ ರಾಷ್ಟçದ ಯಾವುದೇ ಭಾಗವನ್ನು ಬಿಡದೆ ಸಂದರ್ಶಿಸುತ್ತಿದ್ದೇವೆ. ೭೫ ರ ಇಳಿವಯಸ್ಸಿನ ಅಮ್ಮನೊಂದಿಗೆ ನಾನು ಸ್ಕೂಟರ್‌ನಲ್ಲೆ ಉತ್ತರ ಭಾರತದ ಗಡಿಭಾಗದ ೧೩,೭೦೦ ಅಡಿ ಎತ್ತರದ ಪ್ರದೇಶಕ್ಕೂ ಭೇಟಿ ನೀಡಿದ್ದೇನೆ.
ಈ ಪರ್ಯಟನೆ ಬಗ್ಗೆ ಅಮ್ಮ ಚೂಡಾ ರತ್ನಮ್ಮ ಹರ್ಷದಿಂದ ಹೇಳಿದ್ದು ಹೀಗೆ. ಮಗನೊಂದಿಗಿನ ಪ್ರಯಾಣ ಯಾವತ್ತೂ ಆರಾಮದಾಯಕವಾಗಿದೆ. ಆತನ ಸಂಕಲ್ಪದAತೆ ನಾವಿಬ್ಬರು ವಿವಿಧೆಡೆಗಳಿಗೆ ಭೇಟಿ ನೀಡಿದ್ದೇವೆ. ಎಲ್ಲಿಯೂ ಆರೋಗ್ಯ ಸಮಸ್ಯೆ ಕಾಡಲಿಲ್ಲ. ಸಾಮಾನ್ಯವಾಗಿ ಸ್ಕೂಟರ್ ನಲ್ಲಿ ಸುದೀರ್ಘ ಅಂತರದಲ್ಲಿ ಪಯಣಿಸಿದಾಗ ಬೆನ್ನುನೋವು ಕಾಡುತ್ತದೆ. ಆದರೆ ೧ ಲಕ್ಷ ಕಿ.ಮೀ ಸಂಚರಿಸಿದರೂ ನನಗೆ ಮಾತ್ರ ಒಂದಿಷ್ಟು ಬೆನ್ನು ಹುರಿ ಸಮಸ್ಯೆ ಕಾಡಲೇ ಇಲ್ಲ. ಇಂದಿಗೂ ನಾನು ಮತ್ತೆ ೧ ಲಕ್ಷ ಕಿ.ಮೀ. ಸಂಚರಿಸಲು ಫಿಟ್ ಇದ್ದೇನೆ.!!
ಹಾಂ... ಭಾರತದಲ್ಲಿ ಯಾವ ಜಾಗ ಇಷ್ಟ ಆಯಿತು ಎಂದು ಕೇಳಿದೀರಾ? ಅಯ್ಯೋ.. ಎಂಥಾ ಪ್ರಶ್ನೆಯಿದು. ಇಡೀ ಭರತ ಭೂಮಿಯೇ ಪವಿತ್ರ ಭೂಮಿ. ಜಗತ್ತಿನಲ್ಲಿಯೇ ಭಾರತದ ಇಂಚಿAಚೂ ಜಾಗವೂ ಅತ್ಯಂತ ಸುಂದರವಾಗಿದೆ. ಹೀಗಿರುವಾಗ ನನ್ನ ಭಾರತದಲ್ಲಿ ಇಂಥಹದ್ದೇ ಜಾಗ ಚಂದ ಇದೆ ಎಂದರೆ ನನ್ನದು ಪೆದ್ದುತನವಾದೀತು. ಪ್ರತೀಯೋರ್ವರೂ ನಮ್ಮ ಹಾಗೇ ಭಾರತ ಪರ್ಯಟನೆಯನ್ನು ಜೀವಿತ ಕಾಲದಲ್ಲಿ ಮಾಡಲೇಬೇಕು. ಆಗ ಭಾರತದ ಮಹತ್ವ ಇಲ್ಲಿನ ಪ್ರಜೆಗಳಾಗಿ ತಿಳಿಯುತ್ತದೆ ಎಂದರು.
ಸ್ಕೂಟರ್ ಕೊಡುಗೆ!
ಅಮ್ಮ ಮಗನ ಸುದೀರ್ಘ ಪ್ರವಾಸವನ್ನು ಗುರುತಿಸಿದ ಬಜಾಜ್ ಸಂಸ್ಥೆ ಇವರಿಗೆ ೧.೫೦ ಲಕ್ಷ ರು. ಮೌಲ್ಯದ 'ಬಜಾಜ್ ಇಲೆಕ್ಟಿçಕ್ ಸ್ಕೂಟರ್'ನ್ನು ಕೊಡುಗೆಯಾಗಿ ನೀಡಿರುವುದು ವಿಶೇಷ..ಮಿಸ್ಟಿ ಹಿಲ್ಸ್ ನಿಂದ ಸಂಗ್ರಹಿತವಾದ ಆರ್ಥಿಕ ನೆರವನ್ನು ಉತ್ತಮ ಕಾರ್ಯಯೋಜನೆಗೆ ಬಳಸಿಕೊಳ್ಳಿ. ನನ್ನ ಮತ್ತು ಅಮ್ಮನ ಪ್ರವಾಸಕ್ಕೆ ಯಾರಿಂದಲೂ ಆರ್ಥಿಕ ನೆರವು ಪಡೆದಿಲ್ಲ. ಸ್ವಂತ ವೆಚ್ಚದಲ್ಲಿಯೇ ನಾವು ಪ್ರಯಾಣಿಸಿದ್ದೇವೆ ಎಂದು ಕೃಷ್ಣಕುಮಾರ್ ಹೇಳಿದ್ದು ಗಮನಾರ್ಹವಾಗಿತ್ತು. ಅಮ್ಮನ ಸೇವೆಗಿಂತ ಮಿಗಿಲಾದ ಸೇವೆ ಬೇರೆ ಯಾವುದೂ ಇಲ್ಲ. ಜನ್ಮ ಕೊಟ್ಟ ಅಮ್ಮನಲ್ಲೇ ದೇವರಿದ್ದಾನೆ. ಹೀಗಾಗಿ ಆ ದೇವರ ಇಚ್ಚೆ ಪೂರೈಸುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡೆ ಎಂದು ೪೭ ವರ್ಷದ ಕೃಷ್ಣಕುಮಾರ್ ನುಡಿದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಒಂದೂವರೆ ವರ್ಷಗಳಕಾಲ ಯಾತ್ರೆ ಸ್ಥಗಿತಗೊಳಿಸಿ ಮೈಸೂರಿಗೆ ಮರಳಿದ್ದೆವು. ಹೀಗಾಗಿ ೪ ಸುದೀರ್ಘ ವರ್ಷಗಳನ್ನು ನಮ್ಮ ಯಾತ್ರೆ ತೆಗೆದುಕೊಂಡಿತ್ತು ಎಂದೂ ಅವÀರು ವಿವರಿಸಿದರು.
ಮಡಿಕೇರಿಗೆ ಆಗಮಿಸಿದ ಕೃಷ್ಣ ಕುಮಾರ್ ಮತ್ತು ಚೂಡಾ ರತ್ನಮ್ಮ ಅವರನ್ನು ಇಲ್ಲಿನ ಬಾಲ ಭವನದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭ ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ರೋಟರಿ ಸಹಾಯಕ ರಾಜ್ಯಪಾಲ ದಿಲನ್ ಚಂಗಪ್ಪ,ವಲಯ ಸೇನಾನಿ ಕಾರ್ಯಪ್ಪ, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ ಕೊಡಗು, ಶಿಶುಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ.ರವೀಂದ್ರರೈ, ಕಾರ್ಯದರ್ಶಿ ನಮಿತಾ ರೈ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ನಿರ್ದೇಶಕ ಡಾ. ಸಿಆರ್.ಪ್ರಶಾಂತ್, ಅಂಕಾಚಾರಿ ಸೇರಿದಂತೆ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರು ಹಾಜರಿದ್ದರು.