ಮಡಿಕೇರಿ, ಜ. ೧೩: ಡಾಂಬರು ಮಿಶ್ರಣ ಘಟಕದಿಂದ ಗ್ರಾಮದಲ್ಲಿ ವಾಯು ಹಾಗೂ ಶಬ್ದ ಮಾಲಿನ್ಯ ಏರ್ಪಟ್ಟು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಆರೋಪಿಸಿ ಈಚೂರು-ಕುಂದ ಗ್ರಾಮಸ್ಥರು ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಸಮಸ್ಯೆಗಳ ಕುರಿತು ವಿವರಿಸಿದರು. ಕಳೆದ ೧೨ ವರ್ಷಗಳಿಂದ ಡಾಂಬರು ಮಿಶ್ರಣ ಘಟಕ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಮಾಲಿನ್ಯದ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಉಸಿರಾಡಲುಪರದಾಡುವ ಪರಿಸ್ಥಿತಿ ಘಟಕದಿಂದ ಉಂಟಾಗಿದೆ. ಈಗಾಗಲೇ ಪ್ರತಿಭಟನೆ, ರಸ್ತೆ ತಡೆಯನ್ನು ನಡೆಸಲಾಗಿದೆ. ಸಂಬAಧಿಸಿದ ಇಲಾಖೆಗೆ ಮನವಿ ನೀಡಿದರೂ ಯಾವುದೇ ಸ್ಪಂದನ ದೊರೆತ್ತಿಲ್ಲ. ವೀರಾಜಪೇಟೆ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥ ತೀತಮಾಡ ಕರುಂಬಯ್ಯ, ಇತ್ತೀಚಿನ ವರ್ಷಗಳಲ್ಲಿ ಮಾಲಿನ್ಯ ಮಟ್ಟ ಏರಿಕೆಯಾಗಿ ವಾಸ ಮಾಡಲಾಗದ ಸ್ಥಿತಿ ಸೃಷ್ಟಿಯಾಗಿದೆ. ಈ ಹಿಂದೆ ಮಾಲೀಕರಿಗೆ ಈ ಬಗ್ಗೆ ದೂರು ನೀಡಿದ ಸಂದರ್ಭ ಘಟಕ ತೆರವಿನಿಂದ ಹೂಡಿರುವ ಹಣ ನಷ್ಟವಾಗುತ್ತದೆ ಎಂದು ಹೇಳಿದ್ದರು. ಗ್ರಾಮಸ್ಥರೊಂದಿಗೆ ಚರ್ಚಿಸಿ ೨ ವರ್ಷಗಳ ಕಾಲ ಘಟಕ ನಡೆಸಿ ನಂತರ ತೆರವು ಮಾಡುವ ಬಗ್ಗೆ ನಿರ್ಧಾರವೂ ಆಗಿತ್ತು. ಆದರೆ, ಘಟಕ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಘಟಕದ ಕಾರ್ಯಚಟುವಟಿಕೆಯಿಂದ ನೆಮ್ಮದಿ ಇಲ್ಲದಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯೂ ಮೌನ ವಹಿಸಿದೆ ಎಂದು ಆರೋಪಿಸಿದರು. ಈ ಸಂದರ್ಭ ಗುಮ್ಮಟ್ಟಿರ ದರ್ಶನ್, ತೀತಮಾಡ ಅಯ್ಯಪ್ಪ, ಸುಜಿ, ಕೊಕ್ಕಂಡ ರೋಶನ್, ಪಟ್ರಂಗಡ ಶ್ರೀಮಂತ್, ಸುಬ್ರಮಣಿ, ನರೇನ್, ಸುಮಿತ್ರ, ಮಲ್ಲಿಗೆ, ಮೀರ, ಸಚಿ ಸೇರಿದಂತೆ ಇನ್ನಿತರರು ಹಾಜರಿದ್ದರು.