ಶನಿವಾರಸಂತೆ, ಜ. ೧೩: ಸಮೀಪದ ಅಂಕನಹಳ್ಳಿಯ ಮನೆಹಳ್ಳಿಮಠ ತಪೋವನ ಕ್ಷೇತ್ರದ ಅನಘ ಫೌಂಡೇಶನ್ ಹಾಗೂ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಶನಿವಾರಸಂತೆಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಕಾರ್ಯಾಗಾರ ‘ನಾನು ಮತ್ತು ಪರೀಕ್ಷೆ’ ಕಾರ್ಯಕ್ರಮ ತಾ. ೧೭ ರಂದು ಶನಿವಾರ ಬೆಳಿಗ್ಗೆ ೯-೩೦ ಕ್ಕೆ ಚಂಗಡಹಳ್ಳಿ ರಸ್ತೆಯಲ್ಲಿರುವ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಮನೆಹಳ್ಳಿಮಠ ತಪೋವನ ಕ್ಷೇತ್ರ, ಅನಘ ಫೌಂಡೇಶನ್ ಅಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸುವ ಕಾರ್ಯಕ್ರಮವನ್ನು ಹೈಕೋರ್ಟ್ ಹಿರಿಯ ನ್ಯಾಯವಾದಿ ಎಚ್.ಎಸ್.ಚಂದ್ರಮೌಳಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಂತರರಾಷ್ಟಿçÃಯ ಶಿಕ್ಷಣ ತಜ್ಞ ಹಾಗೂ ವಿಶ್ಲೇಷಣಾತ್ಮಕ ತತ್ವಜ್ಞಾನಿ ಎ.ಎಚ್.ಸಾಗರ್, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಹಾಗೂ ವಕೀಲ ಜಗದೀಶ್ ಪಾಲ್ಗೊಳ್ಳಲಿದ್ದಾರೆ. ಸಂಜೆ ೩-೩೦ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಾಗಾರದಲ್ಲಿ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯ ಉಪನ್ಯಾಸಕ ಜಮೀರ್ ಅಹಮದ್ ಅವರು ಪರೀಕ್ಷೆ ಮತ್ತು ಆತ್ಮವಿಶ್ವಾಸ, ಶಿಕ್ಷಣ ತಜ್ಞ ಎ.ಎಚ್.ಸಾಗರ್ ವಿದ್ಯಾರ್ಥಿಗಳಿಗೆ ಅಗತ್ಯವಾದ ಜ್ಞಾನ, ಕೌಶಲ್ಯಗಳು ಮತ್ತು ಮನೋಭಾವ’, ಕುಶಾಲನಗರ ನಿವೃತ್ತ ಶಿಕ್ಷಕ ಊ.ರಾ.ನಾಗೇಶ್ ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ ಮತ್ತು ಜ್ಞಾಪಕ ಶಕ್ತಿ ಹಾಗೂ ಕೊಡ್ಲಿಪೇಟೆ ಪಿಯು ಕಾಲೇಜು ಮುಖ್ಯಶಿಕ್ಷಕ ಅಬ್ದುಲ್ ರಬ್ ಕ್ಲಿಷ್ಟ ವ್ಯಾಕರಣಾಂಶಗಳನ್ನು ಸರಳೀಕರಿಸುವುದು ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.