ಕಣಿವೆ, ಜ. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದ ಸರ್ವೆ ನಂಬರ್ ೩೧/೧ರ ಗಣಪತಿ ದೇವಾಲಯ ಜಾಗದ ಬೇಲಿಯನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಸೂಚನೆ ಮೇರೆಗೆ ವಲಯ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ಸಾರ್ವಜನಿಕರು ಗಣಪತಿ ಪ್ರತಿಷ್ಠಾಪನೆಗೆಂದು ನೀಡಲ್ಪಟ್ಟಿದ್ದ ಜಾಗದ ಬೇಲಿಯನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆ ಸ್ಥಳೀಯ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದ ಹಿನ್ನೆಲೆ ಅರಣ್ಯಾಧಿಕಾರಿ ಭೇಟಿ ನೀಡಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರು ಶಾಸಕರಿಗೆ ದೂರವಾಣಿ ಮೂಲಕ ಘಟನೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಬೇಲಿ ತೆರವುಗೊಳಿಸಲು ಸರ್ಕಾರದಿಂದ ನಿರ್ಧಿಷ್ಟವಾದ ಸುತ್ತೋಲೆ ಇಲ್ಲದೇ ದೇವಾಲಯದ ಬೇಲಿ ತೆರವುಗೊಳಿಸಿದ್ದೇಕೆ. ಆದಷ್ಟು ಶೀಘ್ರ ಈ ಬಗ್ಗೆ ಒಂದು ಸಭೆ ನಡೆಸಲಿದ್ದು, ಸಭೆಯಲ್ಲಿ ಪೂರ್ಣವಾಗಿ ಮಾಹಿತಿ ನೀಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ ಶಾಸಕರು, ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ನೀಡುವ ಕೆಲಸಕ್ಕೆ ಮುಂದಾಗಬೇಡಿ ಎಂದರು.
ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್, ಸುಂದರನಗರದಲ್ಲಿ ಕಳೆದ ೪೦ ವರ್ಷಗಳಿಂದ ಹಲವಾರು ಕುಟುಂಬಗಳು ವಾಸವಿದ್ದು, ಕಳೆದ ೧೫ ವರ್ಷಗಳಿಂದ ಗಣೇಶನ ಪ್ರತಿಷ್ಠಾಪನೆ ಮಾಡುತ್ತಿದ್ದ ಸ್ಥಳಕ್ಕೆ ಸ್ಥಳೀಯರು ಬೇಲಿ ಹಾಕಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಬೇಲಿ ತೆರವುಗೊಳಿಸಿ ಸ್ಥಳೀಯರ ಭಾವನೆಗೆ ಧಕ್ಕೆಯುಂಟುಮಾಡಿದ್ದು, ಶಾಸಕರ ಈ ಬಗ್ಗೆ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು. ಈ ಸಂದರ್ಭ ಸ್ಥಳೀಯ ಮುಖಂಡರಾದ ಸುಕುಮಾರ್ ಮಾತನಾಡಿ, ಅರಣ್ಯ ಇಲಾಖೆಯವರು ಸ್ಥಳೀಯರಿಗೆ ಕಿರಿಕಿರಿಯುಂಟು ಮಾಡುತ್ತಿದ್ದಾರೆ. ಈ ಬಗ್ಗೆ ಶಾಸಕರು ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಡಬೇಕು ಎಂದರು.
ಈ ಸಂದರ್ಭ ಸ್ಥಳೀಯ ಮುಖಂಡರಾದ ಅಣ್ಣಯ್ಯ, ತಂಬಿ, ರಫೀಕ್, ಹರೀಶ್, ಗಣೇಶ್ ಹಾಗೂ ಗ್ರಾಮಸ್ಥರು ಇದ್ದರು.