ಮಡಿಕೇರಿ, ಜ. ೧೩: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಜಾಥಾ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಮಂಗಳವಾರ ನಡೆಯಿತು. ನಗರದ ಕೋಟೆ ಆವರಣದಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಚಾಲನೆ ನೀಡಿ ಸಿರಿಧಾನ್ಯ ಬಳಕೆ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದರು.

ಜಾಥಾದಲ್ಲಿ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಉಪ ನಿರ್ದೇಶಕರಾದ ಸೋಮಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಾಂತ್ರಿಕ ಸಹಾಯಕರು, ಎನ್‌ಸಿಸಿ ವಿದ್ಯಾರ್ಥಿಗಳು, ಕೃಷಿಕರು ಇತರರು ಪಾಲ್ಗೊಂಡಿದ್ದರು.

ಜಾಥಾವು ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನದವರೆಗೆ ನಡೆಯಿತು. ಬಳಿಕ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧಾ ಪ್ರದರ್ಶನ ನಡೆಯಿತು. ಸ್ಪರ್ಧೆಯಲ್ಲಿ ೬೦ ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು, ಸಾಮೆ ಮತ್ತಿತರದಿಂದ ಮಾಡಿರುವ ವಿವಿಧ ರೀತಿಯ ತಿಂಡಿ ತಿನಿಸುಗಳು ಪ್ರದರ್ಶನದಲ್ಲಿದ್ದವು.

ಸಿರಿಧಾನ್ಯದಲ್ಲಿ ಮಾಡಿದ್ದ ರಾಗಿ ದೋಸೆ, ನಿಪ್ಪಟ್ಟು, ಚಟ್ನಿ, ಚಕ್ಕುಲಿ, ಕೋಡು ಬಳೆ, ಕಜ್ಜಾಯ, ಮಿಲ್ಲೇಟ್ ಪಾಯಸ, ಮಿಲ್ಲೇಟ್ ಪಲಾವ್, ರಾಗಿ ಬಿಸ್ಕೇಟ್, ಬಿಳಿ ಜೋಳದ ಬಿಸ್ಕೇಟ್, ಮಿಲ್ಲೇಟ್ ಕೇಕ್, ಸಿರಿಧಾನ್ಯ ಪಡ್ಡು, ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಚಟ್ನಿ, ಸೀಮೆಬದನೆ ಕಟ್ಲೆಟ್ಟ್, ನವಣೆ ದೋಸೆ, ಹಲಸಿನ ಕಟ್ಲೆಟ್ಟ್, ಬೂಕಿ ಕಜ್ಜಾಯ, ರಾಗಿ ಲಡ್ಡು, ಗುಳಿಗೆ ಪಾಯಸ, ಸಜ್ಜೆನಾಡು, ನವಣೆ ಕಟ್ಲೆಟ್ಟ್, ಪಪ್ಪಾಯಿ ಹಲ್ವ, ಸಜ್ಜೆ ಹಲ್ವ, ಸಿರಿಧಾನ್ಯ ಒಡೆ, ಮೆಂತ್ಯೆ ಸೊಪ್ಪಿನ ಒಡೆ, ಮೆಂತ್ಯೆ ಹಿಟ್ಟು, ಹಲವು ಖಾದ್ಯಗಳು ಸ್ಪರ್ಧೆಯಲ್ಲಿ ಗಮನ ಸೆಳೆದವು.

ಖಾರ ತಿನಿಸು, ಸಿಹಿ ತಿನಿಸು ಮತ್ತು ಮರೆತು ಹೋದ ಖಾದ್ಯಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನವಾಗಿ ರೂ. ೫ ಸಾವಿರ, ದ್ವಿತೀಯ ಬಹುಮಾನವಾಗಿ ರೂ. ೩ ಸಾವಿರ ಹಾಗೂ ತೃತೀಯ ಬಹುಮಾನವಾಗಿ ರೂ. ೨ ಸಾವಿರ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಸಿರಿಧಾನ್ಯ ಬಳಕೆಯಿಂದ ಹಲವು ರೀತಿಯ ಪೋಷಕಾಂಶಗಳು ದೊರೆಯಲಿದ್ದು, ಇವುಗಳನ್ನು ಬಳಸುವಂತಾಗಬೇಕು ಎಂದು ಸಲಹೆ ನೀಡಿದರು. ಸಿರಿಧಾನ್ಯ ಬಳಕೆಯಿಂದ ಮೂಳೆಯು ಸಹ ಗಟ್ಟಿಯಾಗಲಿದೆ. ಕ್ಯಾಲ್ಸಿಯಂ ದೊರೆಯಲಿದೆ. ಆದ್ದರಿಂದ ಸಿರಿಧಾನ್ಯ ಬಳಕೆ ಅತ್ಯಗತ್ಯ ಎಂದರು.