ಮಡಿಕೇರಿ, ಜ. ೧೬: ರೋಟರಿಯಿಂದ ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೪ ಜಿಲ್ಲಾ ವ್ಯಾಪ್ತಿಯಲ್ಲಿ ೯೧ ರೋಟರಿ ಕ್ಲಬ್‌ಗಳಲ್ಲಿ ೪ ಸಾವಿರ ಸದಸ್ಯರು ರೋಟರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಪಂಚ ವ್ಯಾಪಿ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಹಲವಷ್ಟು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮೈಸೂರಿನಲ್ಲಿ ತಾಯಿ ಎದೆಹಾಲು ಶೇಖರಿಸುವ ಬ್ಯಾಂಕ್ ಸ್ಥಾಪಿಸಲಾಗಿದ್ದು, ಈ ಮೂಲಕ ಎದೆಹಾಲು ಕೊರತೆಯಿಂದ ಹಾಲುಣಿಸಲು ಸಾಧ್ಯವಾಗದಿದ್ದ ಸಂದರ್ಭ ನವಜಾತ ಶಿಶುಗಳಿಗೆ ಬ್ಯಾಂಕ್ ಮೂಲಕ ಹಾಲು ಪೂರೈಸಿ ಜೀವ ಉಳಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಮತ್ತಷ್ಟು ಜಿಲ್ಲೆಗಳಲ್ಲಿ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಹೃದಯಾಘಾತವಾದ ಸಂದರ್ಭ ಸ್ಥಳದಲ್ಲಿ ಮಾಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿಯನ್ನು ಕೊಡುವ ಕೆಲಸವನ್ನು ಕ್ಲಬ್ ವತಿಯಿಂದ ಮಾಡಲಾಗಿದೆ. ನಮ್ಮಿಂದ ತರಬೇತಿ ಪಡೆದವರು ಹೃದಯಾಘಾತವಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ ನಿದರ್ಶನಗಳಿವೆ ಎಂದು ಹೇಳಿದರು.

ಸರಕಾರಿ ಶಾಲೆಗೆ ಇಂರ‍್ಯಾಕ್ಟ್ ಬೋರ್ಡ್ ವಿತರಣೆ ಮಾಡಲಾಗಿದೆ. ಚಾಮರಾಜನಗರಲ್ಲಿ ೫ ಕೋಟಿ ವೆಚ್ಚದಲ್ಲಿ ನದಿಯ ಪುನಶ್ಚೇತನ, ಚಾಮರಾಜನಗರ, ಗುಂಡ್ಲುಪೇಟೆಯ ಸರಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಹೀಗೆ ಹತ್ತಹಲವು ಕಾರ್ಯಕ್ರಮಗಳನ್ನು ನಡೆಸಿ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಪರಿಣಾಮಕಾರಿ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ ಎಂದರು.

ಉಪ ರಾಜ್ಯಪಾಲ ದಿಲನ್ ಚಂಗಪ್ಪ ಮಾತನಾಡಿ, ಗರ್ಭಕಂಠ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಪಯುಕ್ತ ಚಿಕಿತ್ಸೆ ಕೊಡಿಸುವಲ್ಲಿಯು ಕ್ಲಬ್ ಶ್ರಮಿಸುತ್ತಿದೆ. ರಕ್ತಹೀನತೆ, ಅಪೌಷ್ಠಿಕತೆ ತಡೆಗೂ ಕೆಲಸ ಮಾಡಲಾಗುತ್ತಿದೆ ಎಂದರು.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಮೇಕೇರಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಯೋಜಿಸಿದ್ದು, ಇದಕ್ಕೆ ಶಾಸಕ ಪೊನ್ನಣ್ಣ ಅವರು ಸಹಕಾರ ನೀಡುತ್ತಿದ್ದಾರೆ. ಮೇಕೇರಿ, ಕಗ್ಗೋಡ್ಲು ಅಂಗನವಾಡಿಗಳಿಗೆ ಪರಿಕರಗಳ ವಿತರಣೆ, ಮಾಹಿತಿ ಫಲಕಗಳ ಅನಾವರಣ, ಸೈನಿಕ ಶಾಲೆಗೆ ದಾಖಲಾಗಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಕೃತಕ ಕಾಲು ಜೋಡಣೆ ಶಿಬಿರವನ್ನು ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ನಿರ್ದೇಶಕ ಬಿ.ಜಿ. ಅನಂತಶಯನ ಮಾತನಾಡಿ, ಮಡಿಕೇರಿ ತಾಲೂಕಿನ ೧೬೦೦ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಮಾರ್ಗದರ್ಶನ ನೀಡುವ ಪ್ರೇರಣಾ ಶಿಬಿರವನ್ನು ಆಯೋಜಿಸಲಾಗಿದೆ. ಪೋಲಿಯೋ ನಿರ್ಮೂಲನೆಗೆ ಕ್ಲಬ್ ಮಾಡಿದ ಕೆಲಸದ ಪರಿಣಾಮ ಜಾಗತಿಕ ಮಟ್ಟದಲ್ಲಿ ಪೋಲಿಯೋ ಸಮಸ್ಯೆ ನಿರ್ಮೂಲನೆಯಾಗಿದೆ. ಕೆಲವೊಂದು ದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಈ ಸಮಸ್ಯೆ ಬಾಧಿಸುತ್ತಿದ್ದು, ಅಲ್ಲಿಯೂ ರೋಟರಿ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಪಬ್ಲಿಕ್ ಇಮೇಜ್ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ. ಅನಿಲ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ ಹಾಜರಿದ್ದರು.