ಸೋಮವಾರಪೇಟೆ, ಜ. ೧೬: ಪುಷ್ಪಗಿರಿ ಬೆಟ್ಟತಪ್ಪಲು ವ್ಯಾಪ್ತಿಯಲ್ಲಿನ ನಿಸರ್ಗ ರಮಣೀಯ ಸೌಂದರ್ಯವನ್ನು ಹೊಂದಿರುವ, ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ೬೭ನೇ ವರ್ಷದ ವಾರ್ಷಿಕ ಮಹಾರಥೋತ್ಸವ ಸಹಸ್ರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ವೈಭವಯುತವಾಗಿ ನೆರವೇರಿತು.
೮೦೦ಕ್ಕೂ ಅಧಿಕ ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ೬೭ನೇ ವರ್ಷದ ಮಹಾ ರಥೋತ್ಸವಕ್ಕೆ ಕೊಡಗು ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಆಗಮಿಸಿ ವಿವಿಧ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಶಾAತಳ್ಳಿ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಜರುಗುವ ಜಾತ್ರೆ ಹಾಗೂ ರಥೋತ್ಸವ ಈ ಬಾರಿಯೂ ವೈಭವಯುತವಾಗಿ ನೆರವೇರಿತು. ಕಳೆದ ತಾ.೧೩ ರಂದು ಪ್ರಾರ್ಥನಾ ಪೂಜೆಯೊಂದಿಗೆ ವಿಧ್ಯುಕ್ತ ಚಾಲನೆಗೊಂಡಿರುವ ಪ್ರಸಕ್ತ ವರ್ಷದ ಜಾತ್ರೆಗೆ ತಾ.೧೭ರಂದು(ಇAದು) ತೆರೆಬೀಳಲಿದೆ.
ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಕರುವಿನ ಹಬ್ಬ, ಗರುಡಗಂಬದಲ್ಲಿ ತುಪ್ಪದ ನಂದಾದೀಪ ಬೆಳಗುವದು, ಪುಷ್ಪಗಿರಿ ಬೆಟ್ಟದಲ್ಲಿರುವ ಪುರಾತನ ದೇವಾಲಯದಲ್ಲಿ ದೀಪೋತ್ಸವ, ಅರಸುಬಲ ಸೇವೆ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದ್ದು, ಇಂದು ಮಹಾರಥೋತ್ಸವ ಜರುಗಿತು.
ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ಹಾಗೂ ಶಾಂತಳ್ಳಿಯ ಕೃಷ್ಣಮೂರ್ತಿ ನೇತೃತ್ವದ ತಂಡದವರಿAದ ಬೆಳಗ್ಗಿನಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು. ನಿರಂತರವಾಗಿ ಅನಾದಿಕಾಲದಿಂದಲೂ ನಡೆದುಬಂದ ಪದ್ದತಿಯ ಮೇರೆ ಕೂತಿ ನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ, ಹೊರ ಜಿಲ್ಲೆಯ ನೂರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಶಾಂತಳ್ಳಿಯ ರಥಬೀದಿಯಲ್ಲಿ ಹೊರಟ ರಥವನ್ನು ಭಕ್ತಾದಿಗಳು ದಾರಿಯ ಇಕ್ಕೆಲಗಳಲ್ಲೂ ಹರ್ಷೋದ್ಘಾರದೊಂದಿಗೆ ಸ್ವಾಗತಿಸಿದರು. ರಥಬೀದಿಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ಶ್ರೀಕುಮಾರಲಿಂಗೇಶ್ವರ ಸ್ವಾಮಿಯನ್ನು ಸ್ವಾಗತಿಸಿದರು. ನಂತರ ದೇವರ ಮೂರ್ತಿಯನ್ನು ದೇವಾಲಯಕ್ಕೆ ಮೆರವಣಿಗೆ ಮೂಲಕ ತಂದು ಪೀಠದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಜೆ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.
ಇಂದು ಸಂಪನ್ನ
ತಾ.೧೭ರAದು (ಇಂದು) ಮಹಾ ಸಂಪ್ರೋಕ್ಷಣೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ನಡೆಯುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ತೆರೆಬೀಳಲಿದೆ.
ಜಾತ್ರೋತ್ಸವದ ಅಂಗವಾಗಿ ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕೆ, ಸಂಬಾರ ಮಂಡಳಿ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಥಳೀಯ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾ ಮಟ್ಟದ ಪುರುಷರ ಮುಕ್ತ ಕಬಡ್ಡಿ ಮತ್ತು ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದವು. ಜಿಲ್ಲೆಯ ವಿವಿಧ ಭಾಗಗಳ ಕ್ರೀಡಾಪಟುಗಳೊಂದಿಗೆ ಹೊರ ಜಿಲ್ಲೆಯ ನೂರಾರು ಕ್ರೀಡಾ ಪಟುಗಳು ಪಾಲ್ಗೊಂಡಿದ್ದರು.
ಪ್ರಕೃತಿಯ ಸೌಂದರ್ಯವನ್ನೇ ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯನ್ನು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಆಚರಿಸಿಕೊಂಡು ಬರುತ್ತಿರುವದು ವಿಶೇಷ.
ಜಾತ್ರೆಯನ್ನು ಈ ವ್ಯಾಪ್ತಿಯ ಜನತೆ ತಮ್ಮ ಮನೆಯ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯ ನಿಮಿತ್ತ ಹೊರಭಾಗದಲ್ಲಿ ನೆಲೆಸಿರುವ ಮಂದಿಯೂ ಸಹ ಈ ಜಾತ್ರೆಯಲ್ಲಿ ಒಟ್ಟಾಗುವದರಿಂದ ಇಡೀ ಗ್ರಾಮವೇ ಸಂಭ್ರಮದಲ್ಲಿರುತ್ತದೆ. ಇದರೊಂದಿಗೆ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ದೇವಾಲಯ ಆಡಳಿತ ಮಂಡಳಿ ಹಾಗೂ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದಿAದ ಪ್ರತಿವರ್ಷ ನಡೆಯುತ್ತಿದೆ.
ಪ್ರಸಕ್ತ ವರ್ಷ ನಡೆದ ಅರಸುಬಲ ಸೇವೆಯಲ್ಲಿ ಪುಷ್ಪಗಿರಿ, ಹೆಗ್ಗಡಮನೆ, ಕೊತ್ನಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ, ಬೆಂಕಳ್ಳಿ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕುಡಿಗಾಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು, ಕೂತಿ-ತೋಳೂರುಶೆಟ್ಟಳ್ಳಿ ಭಾಗದ ಗ್ರಾಮಸ್ಥರು, ತಲ್ತರೆಶೆಟ್ಟಳ್ಳಿ, ಯಡೂರು, ಹಾನಗಲ್ಲುಶೆಟ್ಟಳ್ಳಿ ಭಾಗದ ಗ್ರಾಮಸ್ಥರು ವಿಶೇಷ ಮಡಿವಂತಿಕೆಯಿAದ ಗ್ರಾಮದಲ್ಲಿ ಪೂಜೆ ಸಲ್ಲಿಸಿ, ನಂತರ ಕಾಲ್ನಡಿಗೆಯ ಮೂಲಕ ವಾದ್ಯಗೋಷ್ಠಿಯೊಂದಿಗೆ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ, ಅರಸು ಬಲ ಸೇವೆಯಲ್ಲಿ ಭಾಗಿಯಾದರು.
ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್, ಉಪಾಧ್ಯಕ್ಷ ಕೆ.ಟಿ. ಮಧು ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಮುತ್ತಣ್ಣ, ಖಜಾಂಚಿ ಎಸ್.ಆರ್. ಉತ್ತಯ್ಯ, ಸಹ ಕಾರ್ಯದರ್ಶಿ ಎಸ್.ಹೆಚ್. ಗಿರೀಶ್, ಎಸ್.ಜಿ. ಮೇದಪ್ಪ, ಕೆ.ಎಸ್. ರಾಮಚಂದ್ರ, ಕೆ.ಕೆ. ಸುಬ್ಬಯ್ಯ, ಕೆ.ಕೆ. ಪೊನ್ನಪ್ಪ, ಕೆ.ಪಿ. ಚಂಗಪ್ಪ, ಜಿ.ಡಿ. ಬಸವರಾಜು, ಜಿ.ಎಸ್. ಮಧುಕುಮಾರ್ ಸೇರಿದಂತೆ ಪದಾಧಿಕಾರಿಗಳು ಉತ್ಸವದ ಉಸ್ತುವಾರಿ ವಹಿಸಿದ್ದರು. ಮೂರು ದಿನಗಳ ಕಾಲ ದೇವಾಲಯದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನದಾನ ನಡೆಯಿತು. - ವಿಜಯ್ ಹಾನಗಲ್