ಮಡಿಕೇರಿ, ಜ. ೧೭: ಅಪ್ರಾಪ್ತೆ ಗರ್ಭ ಧರಿಸಲು ಕಾರಣನಾದ ವ್ಯಕ್ತಿಗೆ ವೀರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೊ ಕಾಯ್ದೆ ಅಡಿಯಲ್ಲಿ ೨೦ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೨೫ ಸಾವಿರ ರೂ. ದಂಡ ವಿಧಿಸಿ ಇತ್ತೀಚೆಗೆ ತೀರ್ಪು ನೀಡಿದೆ.
ಮೂರ್ನಾಡು ವೆಂಕಟೇಶ್ವರ ಕಾಲೋನಿಯ ಶ್ರೀನಿವಾಸ್ ಎಂಬವರ ಲೈನ್‌ಮನೆಯಲ್ಲಿ ವಾಸವಿದ್ದ ಪ್ರಸ್ತುತ ಮೈಸೂರಿನ ಉದಯಗಿರಿಯ ಕಲ್ಯಾಣಗಿರಿ ಮಾರಿಕಾಂಬಾ ದೇವಾಲಯ ಸನಿಹ ವಾಸವಿರುವ ದಿ.ರಾಘವ ಅವರ ಪುತ್ರ ಎಚ್.ಆರ್. ಮನೋಜ್ (೨೬) ಶಿಕ್ಷೆಗೆ ಗುರಿಯಾದಾತ ವೀರಾಜಪೇಟೆಯಲ್ಲಿ ಖಾಸಗಿ ಬಸ್ ಕ್ಲೀನರ್ ಆಗಿದ್ದ ಮನೋಜ್, ವಿವಾಹವಾಗಿ ಮೂರ್ನಾಡಿನಲ್ಲಿ ನೆಲೆಸಿದ್ದ.
ಖಾಸಗಿ ಬಸ್ಸೊಂದರಲ್ಲಿ ಕ್ಲೀನರ್ ಆಗಿ ಕರ್ತವ್ಯ ನಿರ್ವಹಿಸುವ ಸಂದರ್ಭ ೨೦೧೯ರಲ್ಲಿ ಮೂರ್ನಾಡು ವೀರಾಜಪೇಟೆ ನಡುವೆ ಪ್ರತಿನಿತ್ಯ ಶಾಲೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಂದಿಗೆ ಮಾತನಾಡುತ್ತಾ ಸಲುಗೆ ಬೆಳೆಸಿಕೊಂಡಿದ್ದ. ಇದು ಮುಂದೆ ಪ್ರಣಯಕ್ಕೆ ತಿರುಗಿದ್ದು, ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಆರೋಪಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಬಳಿಕ ಬಾಲಕಿ ವಾಸವಿದ್ದ ಲೈನ್‌ಮನೆಯಲ್ಲಿ ಯಾರೂ ಇಲ್ಲದ ಸಮಯ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ಮನೋಜ್, ಮದುವೆಯಾಗುವ ಭರವಸೆ ನೀಡಿ ಮೂರು ಬಾರಿ ಅತ್ಯಾಚಾರ ಎಸಗಿದ್ದ, ಪರಿಣಾಮ ಬಾಲಕಿ ಗರ್ಭ ಧರಿಸಿದ್ದರೂ ಮನೆ ಮಂದಿಗೆ ತಿಳಿಯದಾಗಿತ್ತು. ಕೊನೆಗೆ ೨೦೧೯ರ ಡಿ.೨೧ರಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು, ೨೦೨೦ರ ಜ.೮ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಮನೋಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಆರೋಪಿಯನ್ನು ಬಂಧಿಸಿ ೨೦೨೦ರ ಫೆ.೧೨ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವೀರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್. ನಟರಾಜು ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ೨೦ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ೨೫,೦೦೦ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ೬ ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್ ಅವರು ಸರ್ಕಾರದ ಪರ ವಾದ ಮಂಡಿಸಿದರು.