ಕೂಡಿಗೆ, ಜ. ೧೬: ಕುಶಾಲನಗರ ತಾಲೂಕು ವ್ಯಾಪ್ತಿಯ ಅನೇಕ ರೈತರು ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯಲು ಈಗಾಗಲೇ ಭೂಮಿಯ ಸಿದ್ಧತೆ ಕಾರ್ಯದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಶುಂಠಿ ಬೆಳೆಯನ್ನು ಬೆಳೆದ ಜಿಲ್ಲೆಯ ನೂರಾರು ರೈತರು ಶುಂಠಿ ಬೆಲೆಯಲ್ಲಿ ಭಾರೀ ಏರಿಳಿತ ನಡುವೆ ಮಾರಾಟ ಮಾಡಿದ್ದರು. ಅದಾಗ್ಯೂ ವಾಣಿಜ್ಯ ಬೆಳೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯ ನೂರಾರು ರೈತರು ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಒಳಗೆ ಶುಂಠಿ ಬೇಸಾಯ ಮಾಡಲು ಉತ್ತಮವಾಗಿ ಫಲವತ್ತಾದ ಭೂಮಿಯನ್ನು ಸಿದ್ಧಪಡಿಸಿದ್ದಾರೆ. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ನೂರಾರು ರೈತರು ಈಗಾಗಲೇ ಭೂಮಿಯನ್ನು ಉಳುಮೆ ಮಾಡಿ ಅದಕ್ಕೆ ಸಂಬAಧಿಸಿದ ಸೆಗಣಿ ಗೊಬ್ಬರ, ಸಾವಯವ ಗೊಬ್ಬರ, ಮಣ್ಣಿನ ಸವಕಳಿ ಅನುಗುಣವಾಗಿ ಸುಣ್ಣ ಸೇರಿದಂತೆ ರೋಗ-ನಿರೋಧಕ ಶಕ್ತಿ ಪುಡಿಗಳನ್ನು ಹಾಕಿ ಟ್ರಾö್ಯಕ್ಟರ್ ಮೂಲಕ ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕೂಡಿಗೆ, ಸೀಗೆಹೊಸೂರು, ತೊರೆನೂರು, ಹೆಬ್ಬಾಲೆ, ಮರೂರು ಸಿದ್ದಲಿಂಗಪುರ, ಅಳುವಾರ, ಹುದುಗೂರು, ಬಾಣವಾರ, ಶಿರಂಗಾಲ ಸೇರಿದಂತೆ ಇತರ ಗ್ರಾಮಗಳ ಪ್ರಗತಿಪರ ರೈತರು ಕಳೆದ ಸಾಲಿನಲ್ಲಿ ಶುಂಠಿಗೆ ಬೆಲೆ ಕಡಿಮೆಯಾಗಿದ್ದರೂ ೧೫ ವರ್ಷಗಳಿಂದಲೂ ಶುಂಠಿ ಬೇಸಾಯ ಮಾಡುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿಯೂ ಶುಂಠಿ ಬೇಸಾಯ ಮಾಡುತ್ತೇವೆ ಎಂದು ಪಣತೊಟ್ಟಿದ್ದಾರೆ. ಭೂಮಿ ಸಿದ್ಧತೆಯ ಜೊತೆಯಲ್ಲಿ ಬಿತ್ತನೆಗೆ ಬೇಕಾಗುವ ಉತ್ತಮ ಗುಣಮಟ್ಟದ ಬಿತ್ತನೆ ಶುಂಠಿಯನ್ನು ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳ ವಿವಿಧ ಭಾಗಗಳಿಂದ ಖರೀದಿಸಲು ಮುಂದಾಗಿದ್ದಾರೆ. - ಕೆ.ಕೆ ನಾಗರಾಜಶೆಟ್ಟಿ.