ಸುಂಟಿಕೊಪ್ಪ, ಜ. ೧೭: ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ನಡೆದಿದೆ. ಮಾದಾಪುರದ ಡಿ. ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮಹಮ್ಮದ್ ರಾಹೀಜ್ (೧೬) ಹಾಗೂ ಮಹಮ್ಮದ್ ನಿಹಾಲ್ (೧೬) ಎಂಬವರುಗಳೇ ಮೃತಪಟ್ಟ ಬಾಲಕರಾಗಿದ್ದಾರೆ.
ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯ ಮಾದಾಪುರ ಹೊಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸುಂಟಿಕೊಪ್ಪ ಪಂಪ್ಹೌಸ್ ನಿವಾಸಿ, ಸುಂಟಿಕೊಪ್ಪ ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಶರೀಫ್ ಅವರ ಪುತ್ರ ಮಹಮದ್ ರಾಹೀಜ್ ಮತ್ತು ಪಂಪ್ಹೌಸ್ ನಿವಾಸಿಯಾದ ಸರದಾರ್ ಅವರ ಪುತ್ರ ಮಹಮದ್ ನಿಹಾಲ್ ಶನಿವಾರದಂದು ಕಾಲೇಜು ಮುಗಿಸಿ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಕಾಲೇಜಿನಿಂದ ಮನೆಗೆ ತೆರಳದೆ ಮಲ್ಲಿಕಾರ್ಜುನ ಕಾಲೋನಿ ಬಳಿಯ ಮಾದಾಪುರ ಹೊಳೆಯಲ್ಲಿ ಈಜಲು ನೀರಿಗಿಳಿದ್ದಿದ್ದು, ಈ ಸಂದರ್ಭ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದರು. ಸ್ಥಳಕ್ಕೆ ಧಾವಿಸಿದ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್ ಹಾಗೂ ಸಿಬ್ಬಂದಿ ಸ್ಥಳೀಯ ನುರಿತ ಈಜುಗಾರರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದರು. ಕುಶಾಲನಗರ ಸಮುದಾಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತ ದೇಹಗಳನ್ನು ಹಸ್ತಾಂತರಿಸಲಾಯಿತು.
ಮಂತರ್ ಭೇಟಿ : ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ಡಾ.ಮಂತರ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಸದಸ್ಯರುಗಳಿಗೆ ಸಾಂತ್ವನ ಹೇಳಿದರು.