ಕಣಿವೆ, ಜ. ೧೭: ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಗೆ ಹೊಂದಿಕೊAಡಿರುವ ಆರ್.ಸಿ ಬಡಾವಣೆಯಲ್ಲಿ ಆಲದ ಮರ ಬಳಿ ಇರುವ ಉದ್ಯಾನವನ್ನು ಅಭಿವೃದ್ಧಿಗೊಳಿಸುವಂತೆ ಸ್ಥಳೀಯ ನಿವಾಸಿಗಳು ಶಾಸಕ ಡಾ.ಮಂತರಗೌಡ ಅವರಿಗೆ ಮನವಿ ಸಲ್ಲಿಸಿದರು.

ಕಾಡು ಗಿಡಗಳಿಂದ ಆವೃತ್ತವಾಗಿದ್ದ ಪ್ರದೇಶವನ್ನು ಸ್ಥಳೀಯರೇ ಶ್ರಮದಾನ ಮಾಡುವ ಮೂಲಕ ಹಾಗೂ ಹಣ ಖರ್ಚು ಮಾಡಿ ವಿಶಾಲವಾದ ಉದ್ಯಾನವಾಗಿ ಮಾರ್ಪಾಡು ಮಾಡಿದ್ದರು.

ಇದರಿಂದಾಗಿ ಆರ್.ಕೆ ಬಡಾವಣೆ, ಆರ್.ಸಿ ಬಡಾವಣೆ ಸೇರಿದಂತೆ ಸುತ್ತಲಿನ ಬೇರೆ ಬೇರೆ ಬಡಾವಣೆಗಳ ವಯೋವೃದ್ಧರು, ಮಕ್ಕಳು, ಮಹಿಳೆಯರು ಈ ವಿಶಾಲವಾದ ಉದ್ಯಾನದಲ್ಲಿ ವಾಯು ವಿಹಾರ ಮಾಡುತ್ತಿದ್ದರು. ಜೊತೆಗೆ ಇದೇ ಬಡಾವಣೆಯ ನಿವಾಸಿಗಳು ರಚಿಸಿರುವ ಬಡಾವಣೆ ಹಿತರಕ್ಷಣಾ ಸಮಿತಿ ವತಿಯಿಂದ ಹೋಳಿ ಹಬ್ಬ, ಗಣಪತಿ ಆಚರಣೆ, ರಾಮನವಮಿ ಹೀಗೆ ರಾಷ್ಟ್ರೀಯ ಹಬ್ಬಗಳನ್ನು ಸಹ ಆಚರಿಸಲಾಗುತ್ತಿತ್ತು. ಆದರೆ, ಇದೇ ಉದ್ಯಾನದೊಳಗಿನ ಸಿಎ ನಿವೇಶನದಲ್ಲಿ ಮೌಲಾನಾ ಆಜಾದ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭ ಶಾಸಕರನ್ನು ಭೇಟಿಯಾದ ನಿವಾಸಿಗಳು ನಾವು ಸ್ವಚ್ಛಂದವಾಗಿ ಇಟ್ಟುಕೊಂಡಿದ್ದ ಜಾಗದಲ್ಲಿ ಶಾಲೆ ನಿರ್ಮಾಣವಾಗುತ್ತಿದೆ. ಹಾಗಾಗಿ ಬದಲೀ ಜಾಗದಲ್ಲಿ ಸುವ್ಯವಸ್ಥಿತ ಉದ್ಯಾನ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.

ನಿವಾಸಿಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ಡಾ.ಮಂತರಗೌಡ, ನೂತನ ಶಾಲಾ ಕಟ್ಟಡ ಕಾಮಗಾರಿಯ ಗುತ್ತಿಗೆದಾರರ ಸಹಕಾರ ಪಡೆಯುವುದರ ಜೊತೆಗೆ ಪುರಸಭೆಯ ಅನುದಾನ ಬಳಸಿ ನಿವಾಸಿಗಳಿಗೆ ಅಗತ್ಯವಿರುವ ಉದ್ಯಾನ ನಿರ್ಮಿಸುವ ಭರವಸೆ ನೀಡಿದರು. ಈ ಸಂದರ್ಭ ಬಡಾವಣೆ ಹಿತರಕ್ಷಣಾ ಸಮಿತಿಯ ಕಣಿವೆ ನಾಗೇಂದ್ರ, ಪುಷ್ಪಲತಾ, ಪುಷ್ಪಾವತಿ, ಸಂದೀಪ್, ಚೈತ್ರ, ಜಗನ್ನಾಥ್, ಸತೀಶ್ ಮೊದಲಾದವರು ಇದ್ದರು.