ಮಡಿಕೇರಿ, ಜ. ೧೭: ಪ್ರಾಚೀನ ಕಾಲದಿಂದಲೂ ನಮ್ಮ ಕಲೆ, ಸಂಸ್ಕೃತಿ ಸಂರಕ್ಷಣೆಯಲ್ಲಿ ದೇವಾಲಯಗಳು ಪ್ರಮುಖ ಪಾತ್ರ ವಹಿಸಿದ್ದು, ಹೀಗಾಗಿಯೇ ಭಾರತದಲ್ಲಿ ಆಲಯಗಳು ಕಲೋಪಾಸನ ಕೇಂದ್ರಗಳಾಗಿಯೂ ಕಂಗೊಳಿಸಿವೆ ಎಂದು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದರು.
ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉದ್ದೇಶಿತ ಶ್ರೀ ಚಾಮುಂಡೇಶ್ವರಿ ಕಲಾಮಂದಿರಕ್ಕೆ ಭೂಮಿಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅನಿಲ್, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ. ವಿದೇಶದ ನೆಲದಲ್ಲಿ ಇರುವವರಿಗೆ ಭಾರತದ ಸಂಸ್ಕೃತಿಯ ಮಹತ್ವದ ಅರಿವಾಗುತ್ತದೆ. ಭಾರತದಲ್ಲಿ ಭಜನೆ, ಹಾಡು, ನೃತ್ಯ, ಯೋಗ, ಧ್ಯಾನಗಳ ಮೂಲಕ ಸಾಂಸ್ಕೃತಿಕ ಕೇಂದ್ರಗಳಾಗಿಯೂ ದೈವಿಕ ಕೇಂದ್ರಗಳು ರೂಪುಗೊಂಡಿವೆ ಎಂದರಲ್ಲದೇ, ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕಲಿಸುವಲ್ಲಿ ದೇವಾಲಯಗಳ ಕಲಾಮಂದಿರಗಳು ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಧ್ಯಕ್ಷರಾಗಿದ್ದ ಕೇಶವಪ್ರಸಾದ್ ಮುಳಿಯ ದೇವಾಲಯದ ಮೂಲಕ ಧಾರ್ಮಿಕ ಶಿಕ್ಷಣದಂತಹ ವಿನೂತನ ಕಾರ್ಯಕ್ರಮ ಆಯೋಜಿಸಿದ್ದನ್ನು ಸ್ಮರಿಸಿದ ಅನಿಲ್ ಎಚ್.ಟಿ. ಇಂತಹ ಧರ್ಮ ಶಿಕ್ಷಣವನ್ನು ಮಕ್ಕಳಿಗೆ ಕಲಿಸುವಲ್ಲಿ ತಾಯದಿಂದರ ಪಾತ್ರವೂ ಮಹತ್ವದ್ದಾಗಿದೆ ಎಂದರು. ಶ್ರೀ ಚಾಮುಂಡೇಶ್ವರಿ ಕಲಾಮಂದಿರದ ಮೂಲಕ ಗ್ರಾಮೀಣ ಭಾಗದ ಸಾಂಸ್ಕೃತಿಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅನಿಲ್, ದೇವಾಲಯಕ್ಕೆ ಕೆಲವು ಕಿ.ಮೀ. ದೂರವಿರುವಂತೆಯೇ ದೇವಾಲಯದ ಮಹತ್ವ ಸಾರುವ ಫಲಕಗಳನ್ನು ಅಳವಡಿಸಿದರೆ ಭಕ್ತರಿಗೆ ಪ್ರಯೋಜನವಾಗುತ್ತದೆ ಎಂದು ಸಲಹೆ ನೀಡಿದರು.
ಮೈಸೂರಿನ ಉದ್ಯಮಿ ಚೆರಿಯಮನೆ ನರೇಶ್ ಮಾತನಾಡಿ, ಪ್ರತಿಯೊಂದನ್ನೂ ಸಂಭ್ರಮದಿAದ ಆಚರಿಸುವ ಮಹತ್ವದ ಗುಣ ಭಾರತೀಯರಲ್ಲಿದೆ. ಹೀಗಾಗಿಯೇ ಸಂಕ್ರಾAತಿ ಸೇರಿದಂತೆ ಭಾರತದ ಹಬ್ಬಗಳೆಲ್ಲವೂ ಮನೆಮಂದಿಯ ಸಂಭ್ರಮವನ್ನು ಒಳಗೊಂಡಿರುತ್ತದೆ. ಸ್ಥಳೀಯರನ್ನು ಒಗ್ಗೂಡಿಸುವ ಗುಣ ಹಬ್ಬಗಳಿಗಿದೆ ಎಂದರು.
ಶ್ರೀ ಚಾಮುಂಡೇಶ್ವರಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜೆ.ಯಶೋಧರ ಮಾತನಾಡಿ, ಪ್ರಕೃತ್ತಿ ಸೌಂದರ್ಯದ ನಡುವಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ರೂ. ೮೦ ಲಕ್ಷ ವೆಚ್ಚದಲ್ಲಿ ಕಲಾಮಂದಿರ ನಿರ್ಮಾಣವನ್ನು ೧ ವರ್ಷದೊಳಗೆ ಮುಕ್ತಾಯಗೊಳಿಸಲಾಗುತ್ತದೆ. ಈ ಮೂಲಕ ಭಜನೆ, ಯೋಗ, ಪ್ರಾಣಾಯಾಮ, ಬಾಲಸಂಸ್ಕಾರ, ಧಾರ್ಮಿಕ ಪ್ರವಚನಗಳಿಗೆ ಈ ಕೇಂದ್ರದಲ್ಲಿ ಅವಕಾಶ ನೀಡಲಾಗುತ್ತದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿಮಲ, ದೇವಾಲಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಆರ್. ರಾಜು ವೇದಿಕೆಯಲ್ಲಿದ್ದರು. ವಿಠಲ ನಿರೂಪಿಸಿದರು. ಮಕರ ಸಂಕ್ರಾAತಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಜರುಗಿತು. ಈ ವ್ಯಾಪ್ತಿಯ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.